Advertisement

ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ

06:22 PM Sep 01, 2020 | Suhan S |

ವಿಜಯಪುರ: ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆಯ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ತಳವಾರ-ಪರಿವಾರ ಸಮುದಾಯದ ಜನರು ಬೇವು, ಲೆಕ್ಕಿಗಿಡದ ತಪ್ಪಲು ಸುತ್ತಿಕೊಂಡು ಬುಡಕಟ್ಟು ವೇಷಧರಿಸಿ ಅರೆಬೆತ್ತಲೆಯಾಗಿ ವಿನೂತನ ಪ್ರತಿಭಟನೆ ನಡೆಸಿದರು.

Advertisement

ಸೋಮವಾರ ನಗರದ ಹೊರ ವಲದಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನಗರದ ದರಬಾರ್‌ ಮೈದಾನಕ್ಕೆ ಬಂದು ಸಮಾವೇಶಗೊಂಡರು. ಮುಖಕ್ಕೆ, ಮೈಗೆಲ್ಲ ಕಪ್ಪು ಬಣ್ಣದಿಂದ ಪಟ್ಟಿಗಳನ್ನು ಬರೆದುಕೊಂಡು, ಮೈಗೆ ಬೇವು ಹಾಗೂ ಲೆಕ್ಕಿ ಗಿಡದ ತಪ್ಪಲು ಸುತ್ತಿಕೊಂಡು, ಕೈಯಲ್ಲಿ ಕೋಲು, ಬಿಲ್ಲು, ಬಾಣ, ಕಟ್ಟಿಗೆಗಳಂಥ ಆಯುಧಗಳನ್ನು ಹಿಡಿದು, ಬುಡಕಟ್ಟು ವೇಷಧರಿಸಿ ವಿನೂತನ ಪ್ರತಿಭಟನೆ ನಡೆಸಿದರು.

ಈಗಾಗಲೇ ರಾಜ್ಯದಲ್ಲಿ ಶೈಕ್ಷಣಿಕ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ವಿವಿಧ ಇಲಾಖೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೀಗಾಗಿ ಕೂಡಲೇ ಜಾತಿ ಪ್ರಮಾಣಪತ್ರ ನೀಡಬೇಕು. ಬರುವ 15 ದಿನಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದಲ್ಲಿ ಸಮಾಜ ಕಲ್ಯಾಣ ಖಾತೆ ಹೊಂದಿರುವ ಡಿಸಿಎಂ ಗೋವಿಂದ ಕಾರಜೋಳ ಅವರ ಕ್ಷೇತ್ರ ಮುಧೋಳ ಪಟ್ಟಣದಲ್ಲಿರುವ ಮನೆಗೆ ಅರೆಬೆತ್ತಲೆ ಹೋರಾಟದ ಮೂಲಕ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಈ ವೇಳೆ ತಳವಾರ-ಪರಿವಾರ ಸಮುದಾಯದ ಮುಖಂಡ ಶಿವಾಜಿ ಮೆಟಗಾರ ಮಾತನಾಡಿ, ಕೇಂದ್ರ ಸರ್ಕಾರ ತಳವಾರ, ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ರಾಜ್ಯಪತ್ರ ಹೊರಡಿಸಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಕಳೆದ 6 ತಿಂಗಳಿಂದ ರಾಜ್ಯ ಸರ್ಕಾರ ಆದೇಶ ಹೊರಡಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ನಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ನೀಡುವ ವಿಷಯದಲ್ಲಿ ರಾಜ್ಯದ ಮಂತ್ರಿಗಳು, ಅಧಿ ಕಾರಿಗಳು ಒಂದೊಂದು ರೀತಿ ಹೇಳಿಕೆ ನೀಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹರಿಹಾಯ್ದರು.

ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕಡ ಪದದ ಪರ್ಯಾಯ ಪದ ಎಂದು ಕೇಂದ್ರ ಸರ್ಕಾರ ರಾಜ್ಯ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅದರೂ ಕೆಲ ಹಿತಾಸಕ್ತಿಗಳು ತಳವಾರ ಮತ್ತು ಪರಿವಾರ ಎಂಬುದು ಕೋಲಿ, ಕಬ್ಬಲಿಗ, ಗಂಗಾಮತ, ಅಂಬಿಗ ಸಮುದಾಯದ ಜತೆ ತಳಕು ಹಾಕಿ ಮೀಸಲಾತಿಯಿಂದ ವಂಚಿತಗೊಳಿಸುವ ಹುನ್ನಾರ ನಡೆಸಿವೆ. ತಳವಾರ ಮತ್ತು ಪರಿವಾರ ಎಂಬುದು ನಾಯಕ ಸಮುದಾಯದ ಪಂಗಡ ಎಂಬುದಕ್ಕೆ ಹಲವು ಸಾಕ್ಷ್ಯ ಒದಗಿಸಲಾಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.

Advertisement

ಈಗಾಗಲೇ ರಕ್ತದಾನ ಚಳವಳಿ, ಪತ್ರ ಚಳವಳಿ, ಜನಪ್ರತಿನಿ ಧಿಗಳ ಮನೆ ಮುಂದೆ ಧರಣಿ ನಡೆಸುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಅಲ್ಲದೇ ಇದೀಗ ಬುಡಕಟ್ಟು ಸಮುದಾಯಕ್ಕೆ ಸೇರಿದ ತಮಗೆ ಪರಿಶಿಷ್ಟ ಪಂಗಡದ ಮಾನ್ಯತೆಯ ಜಾತಿ ಪ್ರಮಾಣಪತ್ರ ನೀಡುವ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್‌ಪಿ ಅನುಪಮ್‌ ಅಗರವಾಲ, ಈಗಾಗಲೇ ತಳವಾರ ಮತ್ತು ಪರಿವಾರ ಸಮುದಾಯದ ಗೊಂದಲ ಬಗೆ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು ಮತ್ತೂಮ್ಮೆ ಪತ್ರ ಬರೆದು ಶೀಘ್ರವೇ ಎಲ್ಲ ಗೊಂದಲ ನಿವಾರಿಸುವುದಾಗಿ ಭರವಸೆ ನೀಡಿದರು.

ಸುಕ್ಷೇತ್ರ ಗೊರವಗುಂಡಗಿ ವರಲಿಂಗೇಶ್ವರಶ್ರೀಗಳು, ದಸ್ತಗಿರಿ ಮುಲ್ಲಾ, ಅಲೋಕ್‌ ರೂಢಗಿ, ಪ್ರಶಾಂತ ಕತ್ತರಕಿ, ರಾಜು ಕೋಳಿ, ಶ್ರೀಶೈಲ ಕೋಳಿ, ಬಾಬುರಾವ್‌ ಕೋಲಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next