ಶಹಾಪುರ: ಸಣ್ಣಪುಟ್ಟ ವ್ಯಾಪಾರಸ್ಥರು ಜೀವನ ಸಾಗಿಸಲು ಸಂಕಷ್ಟವಾಗಿದೆ. ಕಾರಣ ನಗರಸಭೆ ಕೂಡಲೇ ಬೀದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ಇಲ್ಲಿನ ಸಿಐಟಿಯು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿತು.
ದಿನನಿತ್ಯದ ಬದುಕಿಗಾಗಿ ನಗರದ ಪ್ರಮುಖ ಬೀದಿಗಳಲ್ಲಿ ಹಲವು ವರ್ಷಗಳಿಂದ ಚಿಕ್ಕಪುಟ್ಟ ವ್ಯಾಪಾರ ಮಾಡುತ್ತಾ ಬಂದಿರುವ ಸಣ್ಣ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರಸ್ತೆ ಬದಿಯಲ್ಲಿ ಸಾರ್ವಜನಿಕರ ಹಿತಕ್ಕೆ ಧಕ್ಕೆಯಾಗದಂತೆ ವ್ಯಾಪಾರ ವಹಿವಾಟು ಮಾಡುತ್ತಿದ್ದು, ಮಾನವೀಯ ದೃಷ್ಟಿಯಿಂದ ಸೂಕ್ತ ಸ್ಥಳ ಅವಕಾಸ ಕಲ್ಪಿಸಿ ವ್ಯಾಪಾರ ನಡೆಸಲು ಪರವಾನಗಿ ನೀಡಬೇಕು ಎಂದು ಪ್ರತಿಭಟನಾ ನಿರತರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಪೌರಾಯುಕ್ತ ರಮೇಶ ನಾಯಿಕ ಈಗಾಗಲೇ ಈ ಕುರಿತು ಸಭೆ ನಡೆಸಲಾಗಿದ್ದು, ಬೀದಿ ವ್ಯಾಪಾರಿಗಳಿಗೆ ಕಾನೂನು ರೀತಿಯಲ್ಲಿ ಪರವಾನಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳಿಗೆ ಈ ಕುರಿತು ವರದಿ ಒಪ್ಪಿಸಿದ್ದು, ಬೀದಿ ವ್ಯಾಪಾರಿಗಳ ಸಂಘದ ಮನವಿ ಮೇರೆಗೆ ಕಾನೂನಾತ್ಮಕವಾಗಿ ಅವರ ಹಕ್ಕು ನೀಡಲು ವ್ಯವಸ್ಥೆ ಮಾಡಲಾಗಿದೆ. ಇಷ್ಟರಲ್ಲಿಯೇ ವ್ಯಾಪಾರ ವಲಯ ಗುರುತಿಸಿ ಸೂಕ್ತ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭೀಮರಾಯ ಪೂಜಾರಿ, ಡಿ.ವೈ.ಎಫ್.ಐ ತಾಲೂಕು ಮುಖಂಡರು, ಹೊನ್ನಪ್ಪ ಮಾನ್ಪಡೆ, ಸಂಚಾಲಕ ಸೋಫೀಸಾಬ, ಮಾಳಪ್ಪ ಎಸ್. ಎಫ್.ಐ, ವಿಜಯ ರಾಠೊಡ, ಶರಣಪ್ಪ ರಸ್ತಾಪುರ, ಶಂಕರಗೌಡ, ಮಹ್ಮದ ಅನೀಫ್, ನಾಗನಗೌಡ, ರಹೀಮ, ಶಬ್ಬೀರ್, ಚಂದ್ರಶೇಖರ್ ಜಹಿರಖಾನ್ ಇದ್ದರು.