ಬೆಂಗಳೂರು: ಕೊರೊನಾದಿಂದ ಮಧ್ಯಮ ಮತ್ತು ಕೆಳ ವರ್ಗದ ಮೇಲೆ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಶಾಲಾ ಪ್ರವೇಶಾತಿ ಮೇಲೆಯೂ ಬೀರಿದೆ. ಪರಿಣಾಮ, ಈ ಬಾರಿ ಖಾಸಗಿ ಶಾಲೆಗಳಲ್ಲಿ ನೀಡುವ ಶೇ.25ರಷ್ಟು ಆರ್‌ಟಿಇ ಸೀಟುಗಳಿಗೆ ಬೇಡಿಕೆ ಉಂಟಾಗಿದೆ.
ಹಿಂದಿನ ವರ್ಷಗಳಲ್ಲಿ ಆರ್‌ಟಿಇ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಆದರೆ, ಈ ಬಾರಿ ಕೊರೊನಾ ಆರ್ಥಿಕ ಹೊಡೆತ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ಸೇರಿಸಲು ಲಕ್ಷಾಂತರ ರೂ. ಶುಲ್ಕ ಪಾವತಿ ಹೊರೆಯಿಂದ ತಪ್ಪಿಸಿಕೊಳ್ಳಲು ಪೋಷಕರು ಆರ್‌ಟಿಇ ಮೊರೆ ಹೋಗಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 18,555 ಸೀಟುಗಳಿದ್ದು, 20,414 ಅರ್ಜಿಗಳು ಸಲ್ಲಿಕೆಯಾಗಿವೆ. ನಿಗದಿತ ಸೀಟುಗಳಿಗಿಂತ ಸುಮಾರು ಎರಡು ಸಾವಿರ ಅರ್ಜಿಗಳು ಬಂದಿವೆ. ಈ ಪೈಕಿ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸೀಟುಗಳ ದಾಖಲಾಗಿವೆ. 1,276 ಸೀಟುಗಳಿಗೆ 3,989 ಅರ್ಜಿಗಳು ದಾಖಲಾಗಿದ್ದು, ನಂತರ ಸ್ಥಾನದಲ್ಲಿ ಮೈಸೂರು ಜಿಲ್ಲೆಯಲ್ಲಿರುವ 928 ಸೀಟುಗಳಿಗೆ 2,600 ಅರ್ಜಿಗಳು ದಾಖಲಾಗಿವೆ.
2021-22ನೇ ಸಾಲಿನಲ್ಲಿ ಲಭ್ಯವಿದ್ದ 14,036 ಸೀಟುಗಳಿಗೆ 11,531 ಅರ್ಜಿಗಳಷ್ಟೇ ಸಲ್ಲಿಕೆಯಾಗಿದ್ದವು. ಅಂತಿಮವಾಗಿ ಕೇವಲ 3,070 ಸೀಟುಗಳು ಭರ್ತಿಯಾಗಿದ್ದವು. ಅದೇ ರೀತಿ 2020-21ನೇ ಸಾಲಿನಲ್ಲಿ 17,453 ಸೀಟುಗಳಿಗೆ 11,026 ಅರ್ಜಿಗಳಷ್ಟೇ ದಾಖಲಾಗಿದ್ದವು. ಈ ಪೈಕಿ 3,700 ಸೀಟುಗಳು ಭರ್ತಿಯಾಗಿದ್ದವು. ಆದರೆ, ಈ ಬಾರಿ ಕೊರಾನಾ ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಆಸಕ್ತಿ ತೋರಿದ್ದಾರೆ.
ಆಟೋಮೊಬೈಲ್ಸ್‌ನಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಮಾಡುತ್ತಿದ್ದ ಕೆಲಸವನ್ನು ಕೊರೊನಾ ವೇಳೆ ಕಳೆದುಕೊಂಡಿದ್ದೇನೆ. ಈಗ ಜೀವನ ನಿರ್ವಹಣೆಗಾಗಿ ಗಾರ್ಮೆಂಟ್ಸ್ ಕೆಲಸಕ್ಕೆ ಮಾಡುತ್ತಿದ್ದೇನೆ. ಮಗುವನ್ನು ಶಾಲೆಗೆ ಕಳುಹಿಸಬೇಕು. ಖಾಸಗಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ಪಾವತಿಸಲು ಹಣವಿಲ್ಲ. ಹೀಗಾಗಿ, ಆರ್‌ಟಇ ಸೀಟು ಸಿಗಬಹುದು ಎಂಬ ಆಸೆಯಿಂದ ಅರ್ಜಿ ಸಲ್ಲಿಸಿದ್ದೇನೆಂದು ಗಿರಿನಗರದ ನಾಗರಾಜ್ ಹೇಳುತ್ತಾರೆ.
ಕೊರೊನಾದಿಂದ ಹಿಂದಿನ ಎರಡು ವರ್ಷಗಳು ಶಾಲೆಗಳು ಸರಿಯಾಗಿ ನಡೆದಿರಲಿಲ್ಲ. ಇದರ ಜೊತೆಗೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು, ಪೋಷಕರಿಗೂ ಆರ್ಥಿಕವಾಗಿ ಸಮಸ್ಯೆಯಾಗಿದೆ. ಖಾಸಗಿ ಶಾಲೆಗಳಲ್ಲಿ ಸೀಟು ಸಿಗಬಹುದು ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಸಿರಬಹುದು.
- ಪ್ರಸನ್ನಕುಮಾರ್ ಎಂ., ನಿರ್ದೇಶಕರು, ಪ್ರಾಥಮಿಕ ಶಿಕ್ಷಣ
ಎನ್.ಎಲ್.ಶಿವಮಾದು