ಚಿಕ್ಕಬಳ್ಳಾಪುರ: ರಾಜ್ಯದ ಪರಿಶಿಷ್ಟ ಜಾತಿ ಹಾಗೂ ವರ್ಗದ ಭೂ ಪರಭಾರೆ ನಿಷೇಧ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತಂದು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯ ಸಂಘಟನಾ ಸಂಚಾಲಕ ವಿಜಯನರಸಿಂಹ ನೇತೃತ್ವ ದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕದಸಂಸ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾ ಧರಣಿ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿದರು.
ಭೂಮಿ ಸರ್ಕಾರದ ಅಧೀನದಲ್ಲಿದ್ದು, ಕೃಷಿಯನ್ನೇ ರಾಷ್ಟ್ರದ ಕೈಗಾರಿಕೆ ಎಂದು ಪರಿಗಣಿಸಿ ಎಲ್ಲಾ ಜಾತಿ, ಮತ ತಾರತಮ್ಯವಿಲ್ಲದೇ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಭೂ ಮಾಲೀಕತ್ವ, ಜೀತ, ಶ್ರಮಿಕ ಎನ್ನುವ ಬೇಧ ಭಾವವಿಲ್ಲದೇ ಪ್ರತಿಯೊಬ್ಬರು ಸಮಾನವಾಗಿ ಬದುಕುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು.
ದಲಿತರಿಗೆ ಮಂಜೂರಾದ ಭೂಮಿ ರಕ್ಷಣೆಗಾಗಿ ಪಿಟಿಸಿಎಲ್ ಕಾಯ್ದೆಯನ್ನು ರೂಪಿಸಿದ್ದರು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ದಲಿತರ ಭೂಮಿ ಪರಭಾರೆ ನಿಷೇಧ ಕಾಯ್ದೆ ವಿರುದ್ಧ ತೀರ್ಪು ನೀಡಿರುವುದು ಆತಂಕ ಮೂಡಿಸಿದೆ ಎಂದರು.
ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಚಿಂತಾಮಣಿಯ ವಿಜಯನರಸಿಂಹ ಮಾತನಾಡಿ, ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1969ರ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಶೇ.50 ರಷ್ಟು ಭೂಮಿಯನ್ನು ಈಗ ಹಾಲಿ ವಿಲೇ ಇರುವ ಭೂಮಿಯಲ್ಲಿ ಕಾಯ್ದಿರಿಸಿ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಮಿತಿ ಸದಸ್ಯ ಎಸ್.ಅಂಜಿನಪ್ಪ, ಜಿಲ್ಲಾ ಸಂಚಾಲಕ ವೈ.ಎ.ಕಡ್ಡೀಲ್ ವೆಂಕಟರವಣಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಕೆ.ವಿ.ವೆಂಕಟೇಶ್, ವಿ.ಅಮರ್, ನವೀದ್, ಗೊರಮಡಗು ನಾರಾಯಣಸ್ವಾಮಿ, ತಿಪ್ಪೇನಹಳ್ಳಿ ನಾರಾಯಣ ಇದ್ದರು.