Advertisement

ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಆಗ್

09:44 AM Jan 12, 2019 | |

ಚಿತ್ರದುರ್ಗ: ವಿಶ್ವೇಶ್ವರಯ್ಯ ಜಲ ನಿಗಮವು ಸೂಚಿಸಿದಂತೆ ಕೂಡಲೇ ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಮಾಡಲು ತಾಂತ್ರಿಕ ಮಂಜೂರಾತಿ ಮತ್ತು ಅನುಮೋದನೆಗಾಗಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಜೆ. ತಿಪ್ಪೇಸ್ವಾಮಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್‌ ಶಿವಕುಮಾರ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಭದ್ರಾ ಮೇಲ್ದಂಡೆ ಯೋಜನೆ ತುಮಕೂರು ಬ್ರಾಂಚ್ ಕಾಲುವೆ ಮೂಲಕ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆ ಮಾರ್ಗವಾಗಿ ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಮಾಡಲು ಈಗಾಗಲೇ ವಿಶ್ವೇಶ್ವರಯ್ಯ ಜಲ ನಿಗಮವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅತ್ಯಂತ ಬರ ಪೀಡಿತ ಪ್ರದೇಶವಾಗಿರುವ ಧರ್ಮಪುರ ಕೆರೆ ತುರ್ತಾಗಿ ನೀರು ಹರಿಸುವ ಕಾರ್ಯ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಧರ್ಮಪುರ ಕೆರೆ ಸೇರಿದಂತೆ ಧರ್ಮಪುರ ಹೋಬಳಿಯ ಸಣ್ಣ ಮತ್ತು ದೊಡ್ಡ ಕೆರೆಗಳಾದ ಕೋಡಿಹಳ್ಳಿ ಕೆರೆ, ಇಕ್ಕನೂರು ಕೆರೆ, ಈಶ್ವರಗೆರೆ ಕೆರೆ, ಅಬ್ಬಿನಹೊಳೆ, ಗೂಳ್ಯ, ಶ್ರಾವಣಗೆರೆ, ಖಂಡೇನಹಳ್ಳಿ, ಬೇತೂರು, ಸಕ್ಕರ, ಅರಳಿಕೆರೆ, ಹೊಸಕೆರೆ, ಹಲಗಲದ್ದಿ, ಮುಂಗಸವಳ್ಳಿ ಕೆರೆಗಳಿಗೆ ಭದ್ರಾ ನೀರು ಹರಿಸುವುದರಿಂದ ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರು ನೀಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿ ನೀರು ನೀಡದ ಪ್ರದೇಶಗಳಿಗೂ ನೀರು ನೀಡಲಾಗುತ್ತಿದೆ. ಕೆರೆ, ಕಟ್ಟೆಗಳಿಗೆ ನೀರು ನೀಡುವ ಕಾರ್ಯ ಮತ್ತೂಷ್ಟು ಚುರುಕಾಗಿ ನಡೆಯಬೇಕು. ನೀರಾವರಿ ತಜ್ಞ ಕೆ.ಸಿ. ರೆಡ್ಡಿ ವರದಿ ಶಿಫಾರಸು ಅನ್ವಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಧರ್ಮಪುರ ಕೆರೆಗೆ ಪೂರಕ ನಾಲೆಗಳ ಮೂಲಕ ಮೂರು ಕಡೆಯಿಂದ ನೀರು ಹರಿಸಬಹುದು ಎಂದು ಗುರುತಿಸಲಾಗಿತ್ತು. ಆದರೆ ಕೆಲ ಮಾರ್ಪಾಡು ಮಾಡಿದ ನಂತರ ಯೋಜನೆ ವ್ಯಾಪ್ತಿಯಿಂದ ಧರ್ಮಪುರ ಕೆರೆಗೆ ನೀರು ಹರಿಸುವುದು ಬಿಟ್ಟು ಹೋಗಿತ್ತು ಎಂದರು.

ಮುಖ್ಯ ಇಂಜಿನಿಯರ್‌ ಅವರಿಗೆ ಮನವರಿಕೆ ಮಾಡಿಕೊಟ್ಟು ಧರ್ಮಪುರ ಕೆರೆಗೆ ನೀರು ನೀಡುವ ಕುರಿತು ತುರ್ತು ಕಾರ್ಯ ಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.

Advertisement

ಧರ್ಮಪುರ ಕೆರೆ ಇತಿಹಾಸ: ಹಿರಿಯೂರು ತಾಲೂಕಿನ ಧರ್ಮಪುರ ಕೆರೆ ಇತಿಹಾಸ ಪ್ರಸಿದ್ಧ ಕೆರೆ. ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆ. ಕಳೆದ 30 ವರ್ಷಗಳಿಂದ ನೀರು ಹರಿಯದೆ ಗ್ರಹಣ ಹಿಡಿದಿದೆ. ನೊಳಂಬ ರಾಜರು ಹೇಮಾವತಿ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದಂತಹ ಕಾಲದಲ್ಲಿ ಧರ್ಮಪುರ ಕೆರೆ ನಿರ್ಮಿಸಿರುವ ಬಗ್ಗೆ ದಾಖಲೆಗಳಿವೆ.

ಧರ್ಮಪುರ ಕೆರೆ ವಿಸ್ತೀರ್ಣ 700 ಹೆಕ್ಟೇರ್‌ ಪ್ರದೇಶದಲ್ಲಿದ್ದು, 360 ದಶಲಕ್ಷ ಕ್ಯೂಬಿಕ್‌ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆಯ ಉದ್ದ 1,600 ಮೀಟರ್‌ ಇದ್ದು 900 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನೀಡಲಾಗುತ್ತದೆ. ಅಲ್ಲದೆ ಪ್ರತ್ಯಕ್ಷ-ಪರೋಕ್ಷವಾಗಿ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ, ಧರ್ಮಪುರ ಹೋಬಳಿಯ ನೂರಾರು ಹಳ್ಳಿಗಳು ಜಲಪೂರ್ಣಗೊಳ್ಳಲಿವೆ. 1982ರಲ್ಲಿ ಧರ್ಮಪುರ ಕೆರೆ ಸಂಪೂರ್ಣ ತುಂಬಿದ್ದು, ಬಿಟ್ಟರೆ ಇಲ್ಲಿಯ ತನಕ ಪೂರ್ಣ ಪ್ರಮಾಣದ ನೀರು ಹರಿದು ಬಂದಿಲ್ಲ. ಇದರಿಂದಾಗಿ ಇಲ್ಲಿಯ ರೈತರ ಬವಣೆ ತಪ್ಪಿಲ್ಲ. ಆದ್ದರಿಂದ ಮದಲೂರು ಕೆರೆಯಿಂದ ನೀರು ಹರಿಸುವ ಕಾರ್ಯ ತುರ್ತಾಗಿ ಆಗಬೇಕು ಎಂದು ಅವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next