ಶಹಾಪುರ: ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಇಲ್ಲಿನ ನಾಗರಿಕ ಯುವ ವೇದಿಕೆವತಿಯಿಂದ ನಗರದ ಸಿಬಿ ಕಮಾನ್‌ದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಶುಕ್ರವಾರ ಜರುಗಿತು.
ನಗರದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಮರ್ಪಕ ಸಂಚಾರಿ ನಿಯಮ ಪಾಲನೆಗೆ ಒತ್ತು ನೀಡಬೇಕಿದೆ. ಅಲ್ಲದೆ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ಅಗತ್ಯವಿದೆ. ಅದಕ್ಕೂ ಮುಂಚಿತವಾಗಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಅಪಘಾತ ತಡೆಗೆ ಎಚ್ಚರಿಕೆಹಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಕಾರಣ ಇಲ್ಲಿನ ಅವೈಜ್ಞಾನಿಕ ಸಂಚಾರ ನಿಯಮ, ಯಾವುದೇ ಸಂಚಾರ ನಿಯಮ ಪಾಲನೆ, ಟ್ರಾಫಿಕ್ ಜಾಸ್ತಿಯಾಗಿದೆ.
ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಅಗತ್ಯವಿದೆ. ಸಂಚಾರಿ ದೀಪಗಳು ಅಳವಡಿಸಲಾಗಿದೆ. ಆದರೆ ಕಾರ್ಯಾಚರಣೆ ಇಲ್ಲ, ಸ್ಥಗಿತಗೊಂಡು ಬಹಳದಿನಗಳೇ ಕಳೆದಿವೆ. ಹೀಗಾಗಿ ಕೂಡಲೇ ಅಪಘಾತ ತಡೆಗೆ ರೋಡ್ ಡಿವೈಡರ್ ಮತ್ತು ಸಂಚಾರಿ ದೀಪಗಳು ಸೇರಿದಂತೆ ಸಿಸಿ ಕ್ಯಾಮೆರಾಗಳನ್ನು ನಗರದ ಹಲವಡೆ ಅಳವಡಿಸಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ
ಮಂಜುನಾಥ ಸ್ವಾಮಿ ಮನವಿ ಸ್ವೀಕರಿಸಿ ಕೂಡಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಾಗರಿಕ ಯುವ ವೇದಿಕೆ ಕಾರ್ಯಕರ್ತರು ಸೇರಿದಂತೆ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.