ಬಳ್ಳಾರಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ಹೊರಬಂದ ಬಳಿಕ ಇದೀಗ ಮತ್ತೆ ಕರ್ನಾಟಕದ ನಂದಿನಿ ತುಪ್ಪಕ್ಕೆ ಆಂಧ್ರ ಪ್ರದೇಶದಿಂದ ಭಾರೀ ಬೇಡಿಕೆ ಬರುತ್ತಿದೆ. ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ ಬಂದಿದೆ ಎಂದು ಹೊಸಪೇಟೆಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ತಿರುಪತಿಯಿಂದ ನಂದಿನಿ ತುಪ್ಪ ಕಳಿಸುವಂತೆ ಇ-ಮೇಲ್ ಮೂಲಕ ಬೇಡಿಕೆ ಬಂದಿದೆ. ಹೀಗಾಗಿ ನಾವು ನಂದಿನಿ ತುಪ್ಪ ಕಳುಹಿಸುತ್ತಿದ್ದೇವೆ. ಈಗಾಗಲೇ 15 ದಿನಗಳಿಂದ 350 ಟನ್ ನಂದಿನಿ ತುಪ್ಪ ಈಗಾಗಲೇ ಕಳುಹಿಸಲಾಗಿದೆ. ಎರಡು ಸಾವಿರ ಟನ್ ಗೂ ಹೆಚ್ಚು ಬೇಡಿಕೆ ಬಂದಿದೆ. ಬೇಡಿಕೆ ಪೂರೈಕೆಗೆ ನಾವು ಸನ್ನದ್ದ ಎಂದು ಭೀಮಾನಾಯ್ಕ ಹೇಳಿದರು.
ತುಪ್ಪ ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಕೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಅನಾನುಕೂಲವಾಗದೆ ಇರಲಿ ಎಂದು ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಟ್ಯಾಂಕರ್‌ನಲ್ಲಿ ತುಪ್ಪ ತುಂಬಿ ಹೊರಟಾಗ ಯಾವುದೇ ರೀತಿಯ ಕಲಬರಕೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ರಾಜ್ಯದಿಂದ ತಿರುಪತಿಗೆ ಹೋಗುವವರಿಗೂ ಲಾರಿ ಕಾವಲು ಕಾಯಲಾಗುತ್ತದೆ. ತಿರುಪತಿ ಮುಟ್ಟಿದ ಕೂಡಲೇ ಒಟಿಪಿ ನೀಡಿದ ಬಳಿಕ ಟ್ಯಾಂಕರ್ ಓಪನ್ ಮಾಡಲಾಗುತ್ತದೆ ಎಂದರು.
ನಾವು ಟೆಂಡರ್ ಪ್ರಕ್ರಿಯೆಯಲ್ಲಿ ಎಲ್-1 ಇರುವುದರಿಂದ ಈ ಒಪ್ಪಂದ ಅವಧಿ ಇರುವವರೆಗೂ ಮುಂದುವರೆಯುತ್ತದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಪ್ಪ ಸೇರಿದಂತೆ ಎಲ್ಲಾ ಪ್ರಾಡಕ್ಟ್ ಹೆಚ್ಚು ಪ್ರಮಾಣದಲ್ಲಿ ದಾಸ್ತಾನಿದೆ. ಕೆಎಂಎಫ್ ಬ್ರಾಂಡ್ ವಿಚಾರದಲ್ಲಿ ಸಾಕಷ್ಟು ಹೆಮ್ಮೆಯಿದೆ. ದೇಶದಲ್ಲಿ ನಂದಿನ ಬ್ರಾಂಡ್ ನ ವಿಶ್ವಾಸಕ್ಕೆ ಸಮಸ್ತ ಕನ್ನಡಿಗರು ಹೆಮ್ಮೆ ಪಡಬೇಕು. ರಾಜ್ಯದಿಂದ 2020 ರಿಂದ 2024ರ ವರಗೆ ರಾಜ್ಯದಿಂದ ತುಪ್ಪ ಸೇರಿದಂತೆ ಯಾವುದೇ ಉತ್ಪನ್ನ ಕಳಿಸಲಾಗಿಲ್ಲ. ಇದೀಗ ಮತ್ತೆ ತಿರುಪತಿಗೆ ತುಪ್ಪ ಕಳುಹಿಸುತ್ತಿರುವುದು ಹೆಮ್ಮೆ ವಿಚಾರ ಎಂದು ಭೀಮಾನಾಯ್ಕ್ ಹೇಳಿದರು.