ಬೆಂಗಳೂರು: ನಕಲಿ ಬ್ರಾಂಡ್ ಬಟ್ಟೆ ಮಾರಾಟ ಮಾಡುತ್ತಿದ್ದೀರ ಎಂದು ಹೆದರಿಸಿ ಬಟ್ಟೆ ಮಾರಾಟ ಮಳಿಗೆ ಮಾಲೀಕರಿಗೆ 50 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಸಕೆರೆಹಳ್ಳಿಯ ನಿವಾಸಿಗಳಾದ ಕೆ.ಮಹದೇವ್ ಹಾಗೂ ಎನ್. ಅಶೋಕ್ ಕುಮಾರ್ ಬಂಧಿತರು. ಸೆ.21ರಂದು ಕೆ.ಆರ್ ರಸ್ತೆಯಲ್ಲಿರುವ ಸ್ಟೆçಲೋ ಹೆಸರಿನ ರೆಡಿಮೇಡ್ ಬಟ್ಟೆಗಳ ಮಳಿಗೆಗೆ ಹೋಗಿದ್ದ ಆರೋಪಿಗಳಿಬ್ಬರು ಸುದ್ದಿವಾಹಿನಿಯೊಂದರ ವರದಿಗಾರರು ಎಂದು ಹೇಳಿಕೊಂಡು ಕೆಲಕಾಲ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಬಳಿಕ ಮಳಿಗೆ ಮಾಲೀಕರ ಮೊಬೈಲ್ ನಂಬರ್ ಪಡೆದುಕೊಂಡು ವಾಪಾಸ್ ಆಗಿದ್ದರು. ಮಾರನೇ ದಿನವೇ ಅವರಿಗೆ ಕರೆ ಮಾಡಿದ ಆರೋಪಿಗಳು, ನಿಮ್ಮ ಮಳಿಗೆಯಲ್ಲಿ ನಕಲಿ ಬ್ರಾಂಡ್‌ನ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದೀರ ಈ ಕುರಿತ ವಿಡಿಯೋವನ್ನು ಪ್ರಸಾರ ಮಾಡುತ್ತೇವೆ. ಪ್ರಸಾರ ಮಾಡದೇ ಇರಲು 50 ಸಾವಿರ ರೂ.ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಈ ಕುರಿತು ಮಳಿಗೆ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಒಂದು ಇನೋವಾ, ಚಾನೆಲ್ ಎಂದು ಲೋಗೋ ಅಂಟಿಸಿರುವ ಒಮಿನಿ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಚಾನೆಲ್ ಹೆಸರು ಹೇಳಿಕೊಂಡು ಈಗಾಗಲೇ ಹಲವರಿಂದ ಹಣ ವಸೂಲಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆರೋಪಿಗಳ ವಿರುದ್ಧ ಹೆಬ್ಟಾಳ ಠಾಣೆಯಲ್ಲೂ ದೂರು ದಾಖಲಾಗಿದೆ. ಇದೇ ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದು ಬನಶಂಕರಿ ಠಾಣೆ ಪೊಲೀಸರು ತಿಳಿಸಿದ್ದಾರೆ.