Advertisement

Malpe ಔಟರ್‌ ಹಾರ್ಬರ್‌ಗೆ ಬೇಡಿಕೆ: ಮೀನುಗಾರಿಕೆ ಸಚಿವರಿಗೆ ಶಾಸಕ ಯಶ್‌ಪಾಲ್‌ ಮನವಿ

02:10 AM Sep 16, 2023 | Team Udayavani |

ಮಲ್ಪೆ: ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಸಹಿತ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸಲ್ಲಿಸಿರುವ ವಿವಿಧ ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರದ ಮೂಲಕ ಶೀಘ್ರ ಅನುಮೋದನೆ ನೀಡುವಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದು ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರನ್ನು ಶಾಸಕ ಯಶ್‌ಪಾಲ್‌ ಸುವರ್ಣ ಭೇಟಿಯಾಗಿ ಮನವಿ ಮಾಡಿದರು.

Advertisement

ಮಲ್ಪೆಯಲ್ಲಿ ಮೀನುಗಾರಿಕೆ ಬೋಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಬಂದರಿನಲ್ಲಿ ಸುಗಮ ಚಟುವಟಿಕೆಗೆ ಜಾಗದ ಸಮಸ್ಯೆ ಬಗೆಹರಿಸಲು ಪಡುಕೆರೆಯಲ್ಲಿ ಸುಮಾರು 6 ಸಾವಿರ ಬೋಟ್‌ ನಿಲುಗಡೆ ಸಾಮರ್ಥ್ಯದ ಔಟರ್‌ ಹಾರ್ಬರ್‌ ನಿರ್ಮಾಣ, ಪಡುಕೆರೆ ಸೇತುವೆ ಬಳಿ 500 ಮೀಟರ್‌ ಜೆಟ್ಟಿ ಹಾಗೂ 100 ಮೀಟರ್‌ ನಾಡದೋಣಿ ತಂಗುದಾಣದ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ನೀಡುವಂತೆ ಮನವಿ ಮಾಡಿದರು.

ಟೆಬ್ಮಾ ಶಿಪ್‌ಯಾರ್ಡ್‌
ಟೆಬ್ಮಾ ಶಿಪ್‌ ಯಾರ್ಡ್‌ ಈ ಹಿಂದೆ ನೀಡಿರುವ ಜಾಗದ ಲೀಸ್‌ ಅವಧಿ ಮುಗಿದ ಕೂಡಲೇ ಜಾಗವನ್ನು ಮೀನುಗಾರಿಕೆ ಇಲಾಖೆ ಹಿಂಪಡೆದು ಮೀನುಗಾರಿಕೆ ಚಟುವಟಿಕೆಗಳ ಬಳಕೆಗೆ ಅವಕಾಶ ಕಲ್ಪಿಸುವುದು, ಮಹಿಳಾ ಮೀನುಗಾರರ ಶೂನ್ಯ ಬಡ್ಡಿದರ ಸಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮೂಲಕ ಅನುಷ್ಠಾನ, ಮೀನುಗಾರರ ಬಹುದಿನಗಳ ಬೇಡಿಕೆಗಳಾದ ಸೀ- ಆ್ಯಂಬುಲೆನ್ಸ್‌, ಕಡಲ್ಕೊರೆತ ತಡೆಗೆ ತಡೆಗೋಡೆ ನಿರ್ಮಾಣ, ಬೋಟ್‌ ಮರು ನಿರ್ಮಾಣದ ಸಾಧ್ಯತಾ ಪ್ರಮಾಣ ಪತ್ರದ ಅವಧಿಯನ್ನು ಮರದ ಬೋಟಿಗೆ 5 ವರ್ಷ ಹಾಗೂ ಸ್ಟೀಲ್‌ ಬೋಟಿಗೆ 7 ವರ್ಷಕ್ಕೆ ಕಡಿತಗೊಳಿಸುವುದು, ಪ್ರತೀ ವರ್ಷ ಡ್ರೆಜ್ಜಿಂಗ್‌ ಕಾಮಗಾರಿ, ಮೀನುಗಾರಿಕೆ ದೋಣಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಡೀಸೆಲ್‌ ಹಾಗೂ ಸೀಮೆ ಎಣ್ಣೆ ಪೂರೈಕೆ, ಅಂತಾರಾಜ್ಯ ಮೀನುಗಾರಿಕೆ ಸಮನ್ವಯ ಸಮಿತಿ ರಚನೆ ಮಾಡುವಂತೆ ಸಚಿವರಲ್ಲಿ ಪ್ರಸ್ತಾವಿಸಿದರು.

ಕರಾವಳಿಯ ಮೂರು ಜಿಲ್ಲೆಯ ಮೀನುಗಾರ ಸಂಘಟನೆಗಳ ಮುಖಂಡರೊಂದಿಗೆ ಉಡುಪಿಯಲ್ಲಿ ಸಭೆ ನಡೆಸುವಂತೆಯೂ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next