ಕುಂದಗೋಳ: ರೈತ ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನರು ಮದ್ಯದ ದಾಸರಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ರಾಜ್ಯ ಸರ್ಕಾರ ಮದ್ಯ ಮುಕ್ತ, ಸಾಲ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯ ಉತ್ತರ ಕರ್ನಾಟಕ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಆಗ್ರಹಿಸಿದರು.
ಬೆಟದೂರ ಗ್ರಾಮದಿಂದ ಚಕ್ಕಡಿಯೊಂದಿಗೆ ಮೆರವಣಿಗೆ ಮುಖಾಂತರ ಕುಂದಗೋಳಕ್ಕೆ ಆಗಮಿಸಿ ಗಾಳಿ ಮರೆಮ್ಮ ದೇವಸ್ಥಾನದ ಬಳಿ ಕೆಲಕಾಲ ಪ್ರತಿಭಟಿಸಿ, ನಂತರ ಪಟ್ಟಣ ಪ್ರಮುಖ ಬೀದಿಗಳ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರೈತರು ನಿತ್ಯ ಹೊಲಗಳಿಗೆ ತೆರಳಲು ಸೂಕ್ತವಾದ ರಸ್ತೆಗಳಿಲ್ಲದೆ ಪರದಾಡುತ್ತಿದ್ದಾರೆ. ರೈತರು ಹೊಲವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಸುಧಾರಿಸಬೇಕು. ರೈತರಿಗೆ ಬರುವ ವಿಮಾ ಹಣ ಹಾಗೂ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ಶೇಂಗಾ ಖರೀದಿ ಕೇಂದ್ರ ಆರಂಭಿಸಿದ್ದು, ಕುಂದಗೋಳ ಪಟ್ಟಣದಲ್ಲಿಯೇ ಖರೀದಿಸಬೇಕು. ಗ್ರಾಮೀಣದಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ಮಂಜುನಾಥ ಕಾಲವಾಡ, ಕಲ್ಮೇಶ ಲಿಗಾಡಿ, ಚಂದ್ರಶೇಖರ ಕಬ್ಬೂರ, ರಮೇಶ ಕಿತ್ತೂರ, ಸುರೇಶ ದೊಡಮನಿ, ಶೇಖಪ್ಪ ಬಾಲನಾಯ್ಕರ, ಶಿವಪ್ಪ ಕೊಪ್ಪದ, ರಾಜು ದೊಡಶಂಕರ, ಬಸಯ್ಯ ಸ್ಥಾವರೆಮಠ, ಫಕ್ಕೀರಗೌಡ ಹೂವಣ್ಣವರ, ಅಮೃತ ಕಮ್ಮಾರ, ಶಿವನಗೌಡ ಶಿಂದೋಗಿ, ಶಿವಾನಂದ ತಹಶೀಲ್ದಾರ್, ಗಂಗಪ್ಪ ಪರಣ್ಣವರ ಇನ್ನಿತರರಿದ್ದರು