Advertisement

Maharashtra ಕನ್ನಡದ ಹಳ್ಳಿಗಳಿಗೆ ಕರ್ನಾಟಕದ ನೀರಿಗೆ ಬೇಡಿಕೆ

07:55 PM Aug 16, 2023 | Shreeram Nayak |

ವಿಜಯಪುರ: ಮಹಾರಾಷ್ಟ್ರ ರಾಜ್ಯದ ಜತ್‌ ತಾಲೂಕಿನ ಗಡಿ ಭಾಗದ ಕನ್ನಡದ ಹಳ್ಳಿಗಳಿಗೆ ಕರ್ನಾಟಕ ಸರ್ಕಾರ ನೀರು ಹರಿಸುವಂತೆ ಜತ್‌ ಶಾಸಕ ವಿಕ್ರಮಸಿಂಹ ಸಾವಂತ ನೇತೃತ್ವದ ಮಹಾರಾಷ್ಟ್ರದ ರೈತರ ನಿಯೋಗ ವಿಜಯಪುರ ಜಿಲ್ಲಾ ಉಸ್ತುವಾರಿ ಹೊಂದಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಮಾಡಿದೆ.

Advertisement

ಬುಧವಾರ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ನಿವಾಸಕ್ಕೆ ಆಗಮಿಸಿದ ಜತ್‌ ಶಾಸಕ ವಿಕ್ರಮ ಸಿಂಹ ನೇತೃತ್ವದ ಮಹಾರಾಷ್ಟ್ರ ರೈತರು ತಾವು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ರೂಪಿಸಿದ್ದೀರಿ. ಅದರಿಂದ ಮಹಾರಾಷ್ಟ್ರ ರಾಜ್ಯದ ಜತ್‌ ತಾಲೂಕಿನ ಪೂರ್ವ ಭಾಗದ ಗ್ರಾಮಗಳಿಗೆ ನೀರು ಹರಿಸಿದ್ದೀರಿ ಎಂದು ಸ್ಮರಿಸಿದರು. ಅಲ್ಲದೇ ಈಗಲೂ ಅದೇ ಮಾದರಿಯಲ್ಲಿ ನಮ್ಮ ಭಾಗಕ್ಕೆ ಮಾನವೀಯ ನೆಲೆಯಲ್ಲಿ ನೀರು ಹರಿಸಿ ಎಂದು ಮನವಿ ಮಾಡಿದರು.

ಮಹಾರಾಷ್ಟ್ರ ರಾಜ್ಯದಲ್ಲಿ ಮಹಿಷಾಳ ಏತ ನೀರಾವರಿ ಯೋಜನೆ ಇದ್ದರೂ ಜತ್‌ ಭಾಗದ ಕನ್ನಡಿಗರ ಗ್ರಾಮಗಳಿಗೆ ತಲುಪುತ್ತಿಲ್ಲ. ಕರ್ನಾಟಕದ ತುಬಚಿ-ಬಬಲೇಶ್ವರ ಏತ ನೀರಾವರಿ ಮೂಲಕ ನಮ್ಮ ಭಾಗದ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಲು ನೀರು ಹರಿಸಿ ಎಂದು ರೈತರ ನಿಯೋಗದ ನೇತೃತ್ವ ವಹಿಸಿದ್ದ ಶಾಸಕ ವಿಕ್ರಮಸಿಂಹ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರಿಗೆ ಕೋರಿದರು.

ಮಹಾರಾಷ್ಟ್ರದ ಜತ್‌ ಶಾಸಕರ ನೇತೃತ್ವದ ರೈತರ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವ ಎಂ.ಬಿ.ಪಾಟೀಲ, ಸದ್ಯ ಕರ್ನಾಟಕದಲ್ಲಿನ ನಮ್ಮ ಭಾಗದಲ್ಲಿ ಕೃಷ್ಣಾ ನದಿಗೆ ನೀರಿನ ಒಳಹರಿವು ಕಡಿಮೆ ಇದೆ. ಮುಂಬರುವ ದಿನಗಳಲ್ಲಿ ಕೃಷ್ಣಾ ನದಿ ಹಾಗೂ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಿದಲ್ಲಿ ಅದನ್ನು ಆಧರಿಸಿ ನಮ್ಮ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next