Advertisement

ರಾಗಿ, ಜೋಳದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಬೇಡಿಕೆ

10:04 PM Jul 31, 2023 | Team Udayavani |

ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಹಾಗೂ ಜೋಳ ಖರೀದಿಗೆ ನಿಗದಿಪಡಿಸಿರುವ ಪ್ರಮಾಣವನ್ನು ಹೆಚ್ಚಿಸಬೇಕು ಎಂದಿರುವ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ, ಮಾಲ್ದಂಡಿ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಜಾಸ್ತಿ ಮಾಡುವಂತೆಯೂ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

Advertisement

ಸೋಮವಾರ ದೆಹಲಿಯಲ್ಲಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ರಾಜ್ಯದಲ್ಲಿನ ಸಿರಿಧಾನ್ಯ ಬೆಳೆಗಾರರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಬರಪೀಡಿತ ವಲಯವನ್ನೇ ಹೆಚ್ಚಾಗಿ ಹೊಂದಿರುವ ಕರ್ನಾಟಕವು ಕಡಿಮೆ ನೀರು ಬಳಕೆ ಮಾಡುವ ಸೂಕ್ತ ಬೆಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಈಗಾಗಲೇ ಘೋಷಿಸಿದ್ದು, ಮಿಲೆಟ್‌ ಮಿಷನ್‌ ಯೋಜನೆಯಡಿ ಕರ್ನಾಟಕದ ರಾಗಿ, ಜೋಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕರ್ನಾಟಕದಲ್ಲಿ ನಿಗದಿತ ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಭತ್ತ, ಅಕ್ಕಿ ಖರೀದಿಸುವುದರ ಜೊತೆಗೆ ರಾಗಿ, ಜೋಳವನ್ನೂ ಖರೀದಿಸಿ ವಿತರಣೆ ಮಾಡಲಾಗುತ್ತಿದೆ.

ಗೊಬ್ಬರದ ಬೆಲೆ ಹೆಚ್ಚಳ, ಬೆಂಬಲ ಬೆಲೆ ಕಡಿಮೆ: 2014 ರಿಂದ ಇದುವರೆಗೆ ರಸಗೊಬ್ಬರದ ದರದಲ್ಲಿ ಮೂರುಪಟ್ಟು ಹೆಚ್ಚಳ ಆಗಿದ್ದು, ಡಿಎಪಿ ದರವು 460 ರೂ.ಗಳಿಂದ 1350 ರೂ. ಆಗಿದ್ದರೆ, ಕಾಂಪ್ಲೆಕ್ಸಸ್‌ ದರವು 400 ರೂ.ಗಳಿಂದ 1470 ರೂ.ಗೆ ಏರಿಕೆ ಆಗಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರತಿ ಕ್ವಿಂಟಾಲ್‌ ಹೈಬ್ರಿಡ್‌ ಜೋಳಕ್ಕೆ 3,180 ರೂ. ಹಾಗೂ ಮಾಲ್ದಂಡಿ ಜೋಳಕ್ಕೆ 3,225 ರೂ. ಮತ್ತು ರಾಗಿಗೆ 3,846 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ. ರಾಗಿ ಹಾಗೂ ಮಾಲ್ದಂಡಿ ಜೋಳದ ನಡುವೆ 620 (ಶೇ.83.8) ರೂ.ಗಳಷ್ಟು ಅಂತರವಿದ್ದು, ಮಾರುಕಟ್ಟೆಯಲ್ಲಿ ಮಾಲ್ದಂಡಿ ಜೋಳದ ಬೆಲೆಯು ಅಂದಾಜು 4 ಸಾವಿರ ರೂ.ಗಳವರೆಗೆ ಇದೆ. ಕರ್ನಾಟಕವೂ ರಾಗಿ, ಜೋಳ ಬೆಳೆಗಳ ವಿಸ್ತರಣೆ ಹೆಚ್ಚಿಸುವ ಗುರಿ ಹೊಂದಿದೆ. ದಲ್ಲಾಳಿಗಳು ರೈತರನ್ನು ಲೂಟಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಗಿ 8 ಲಕ್ಷ ಮೆಟ್ರಿಕ್‌ ಟನ್‌, 3 ಲಕ್ಷ ಮೆಟ್ರಿಕ್‌ ಟನ್‌ ಜೋಳಖರೀದಿಗೆ ಮಾತ್ರ ಗುರಿ ನೀಡಿದೆ. ಈ ಖರೀದಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳೆ ನಿಗದಿತ ಎಂಎಸ್‌ಪಿ ರಾಜ್ಯದ ಬೇಡಿಕೆ
ರಾಗಿ 3,846 ರೂ. 5000 ರೂ.
ಜೋಳ 3,225 ರೂ. 4,500 ರೂ.

Advertisement

ಎಂಎಸ್‌ಪಿ ಹೆಚ್ಚಳ ಮಾಡಲು ಬೇಡಿಕೆ: ರೈತರ ಬೇಡಿಕೆ ಮತ್ತು ಘೋಷಿತ ಎಂಎಸ್‌ಪಿಗೂ ಸಾಕಷ್ಟು ವ್ಯತ್ಯಾಸವಿದ್ದು, ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗುತ್ತಿದೆ. ಪೌಷ್ಟಿಕಾಂಶ ಸೇರಿದಂತೆ ಹಲವು ರೀತಿಯ ಲಾಭವುಳ್ಳ ಸಿರಿಧಾನ್ಯಗಳ ಉತ್ಪಾದನೆ ಮತ್ತು ಖರೀದಿಗೆ ಕೇಂದ್ರ ಸರ್ಕಾರವು ಮಿಲೆಟ್‌ ಮಿಶನ್‌ ಅಡಿ ಪ್ರೋತ್ಸಾಹ ನೀಡಬೇಕು. ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷೆಯಂತೆ ರಾಗಿಗೆ ಕನಿಷ್ಠ 5 ಸಾವಿರ ರೂ. ಮತ್ತು ಜೋಳಕ್ಕೆ 4,500 ರೂ. ಬೆಂಬಲ ಬೆಲೆ ಘೋಷಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಎಲ್ಲ ರಾಜ್ಯಗಳಿಂದ ಅಕ್ಕಿ, ಗೋಧಿ ದಾಸ್ತಾನುಗಳ ಮಾರಾಟ ಮತ್ತು ಸರಬರಾಜಿನ ಮೇಲೆ ಆಹಾರ ನಿಗಮದ ಮೂಲಕ ನಡೆಯುತ್ತಿರುವಂತೆ ರಾಗಿ ಹಾಗೂ ಜೋಳದ ದಾಸ್ತಾನಿನ ಮಾರಾಟವೂ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next