ಕಲಬುರಗಿ: ನಗರದಲ್ಲಿ ನಡೆದ ಪಿಂಚಣಿದಾರರ ಸಮಾವೇಶದಲ್ಲಿ ಇಪಿಎಸ್ ಪಿಂಚಣಿದಾರರ ಪಿಂಚಣಿ ಮೊತ್ತವನ್ನು ಹೆಚ್ಚಿಸುವಂತೆ ಆಗ್ರಹಿಸುವ ನಿರ್ಣ ಕೈಗೊಳ್ಳಲಾಯಿತು. ಸಮಾವೇಶದಲ್ಲಿ ಸರ್ಕಾರ ಇಪಿಎಸ್ ಪಿಂಚಣಿದಾರರಿಗೆ ಅನ್ಯಾಯ ಮಾಡುತ್ತಿದೆ. ಭವಿಷ್ಯ ನಿಧಿ ಸದಸ್ಯರಾಗಿರುವ ಕೈಗಾರಿಕೆ ಮತ್ತಿತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ 1995ರ ನವಂಬರ್‌ನಲ್ಲಿ ಪಿಂಚಣಿ ಸೌಲಭ್ಯ ನೀಡುವ ಯೋಜನೆ ಜಾರಿಗೆ ತರಲಾಗಿತ್ತು. ಸರ್ಕಾರಿ ನೌಕರರಂತೆ ಪಿಂಚಣಿ ಸಿಗುವುದೆಂದು ಸಂತಸವಾಗಿತ್ತು. ಆದರೆ ನಿವೃತ್ತಿ ನಂತರ ಭವಿಷ್ಯನಿಧಿ ಸದಸ್ಯ ನೌಕರರಿಗೆ ಭಿಕ್ಷೆಯಂತೆ 200 ರಿಂದ 300 ರೂ. ಇಪಿಎಸ್ ಪಿಂಚಣಿ ನೀಡಲು ಆರಂಭಿಸಲಾಯಿತು. ಪಿಂಚಣಿ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು ಎಂದು ಇಪಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಪ್ರಕಾಶ ಯಂಡೆ ಹೇಳಿದರು.
ಭವಿಷ್ಯ ನಿಧಿ ಟ್ರಸ್ಟ್ ಮೇಲೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದಾಗ, ಹಿಂದಿನ ಯುಪಿಎ ಸರ್ಕಾರ ಇಪಿಎಸ್ ಪಿಂಚಣಿಯನ್ನು ಕನಿಷ್ಠ ಒಂದು ಸಾವಿರ ರೂ.ಗಳೆಂದು ಘೋಷಿಸಿತ್ತು. ಈಗಿನ ಪರಿಸ್ಥಿತಿಯಲ್ಲಿ ಸಾವಿರ ರೂ.ಗಳಲ್ಲಿ ನಿವೃತ್ತ ನೌಕರರು ಜೀವನ ನಡೆಸುವುದು ಸಾಧ್ಯವಿಲ್ಲ ಎಂದು ಪಿಂಚಣಿದಾರರು ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದಾಗ ಸರ್ಕಾರ ರಾಜ್ಯಸಭಾ ಸಮಿತಿ (ಭಗತ್‌ಸಿಂಗ್ ಕೋಶಿಯಾರ ಸಮಿತಿ) ರಚಿಸಿ, ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಿತ್ತು.
ಈ ಸಮಿತಿ ಕನಿಷ್ಠ ಮೂರು ಸಾವಿರ ರೂ. ಇಪಿಎಸ್ ಪಿಂಚಣಿ ನೀಡುವಂತೆ ಹಾಗೂ ಅದಕ್ಕೆ ತುಟ್ಟಿಭತ್ಯೆ ನೀಡಲು ಶಿಫಾರಸ್ಸು ಮಾಡಿ ರಾಜ್ಯ ಸಭೆಗೆ ವರದಿ ಸಲ್ಲಿಸಿದೆ. ಈ ಎಲ್ಲ ಬೆಳವಣಿಗೆಗಳು ಇಪಿಎಸ್ ಪಿಂಚಣಿದಾರರಿಗೆ ತಿಳಿದಿಲ್ಲ. ಆದ್ದರಿಂದ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಕೋಶಿಯಾ ಸಮಿತಿ ವರದಿ ಜಾರಿಗೆ ಆಗ್ರಹಿಸಲು ಪಿಂಚಣಿದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ಇದಕ್ಕಾಗಿ ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ರಾಜ್ಯದಲ್ಲಿ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲೂ ಇಪಿಎಸ್ ಪಿಂಚಣಿದಾರರ ಜಾಗೃತಿ ಸಮಿತಿ ಸಭೆ ನಡೆಯಿತು. ಪತ್ರಕರ್ತ ಶ್ರೀಕಾಂತಾಚಾರ್ಯ ಮಣೂರ ಸಮಾವೇಶಕ್ಕೆ ಚಾಲನೆ ನೀಡಿದರು. ಸಂಚಾಲಕರಾದ ಸುಭಾಷ ಹೊದಲೂರಕರ, ರಾಘವೇಂದ್ರರಾವ ಕುಲಕರ್ಣಿ, ಬಸವರಾಜ ಸಾಹುಕಾರ ಹಾಗೂ ಇತರರು ಭಾಗವಹಿಸಿದ್ದರು