Advertisement

ಎಂಎಸ್‌ಪಿ ಕಾನೂನು ಜಾರಿಗೆ ಆಗ್ರಹ

06:29 PM Aug 01, 2022 | Team Udayavani |

ರಾಯಚೂರು: ಕೇಂದ್ರ ಸರ್ಕಾರ ಬೆಳೆಗಳಿಗೆ ವೈಜ್ಞಾನಿಕ 12ಬೆಲೆ ನಿಗದಿಗೊಳಿಸುವ ನಿಟ್ಟಿನಲ್ಲಿ ಎಂಎಸ್‌ಪಿ ಕಾನೂನು ಜಾರಿಗೊಳಿಸಬೇಕು ಹಾಗೂ ಕೃಷಿ ಮಸೂದೆಗಳ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ರವಿವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕೃಷಿ ಮಸೂದೆಗಳ ಹಿಂಪಡೆಗಾಗಿ ದೆಹಲಿಯಲ್ಲಿ ಒಂದು ವರ್ಷಕ್ಕೂ ಅಧಿಕ ಕಾಲ ನಡೆದ ಸುದೀರ್ಘ‌ದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಮಸೂದೆಗಳನ್ನು ಹಿಂಪಡೆಯುವ ಭರವಸೆ ನೀಡಿತ್ತು. ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವುದರ ಜತೆಗೆ ಉಳಿದ ಹಕ್ಕೊತ್ತಾಯಗಳನ್ನು ಈಡೇರಿಸಲು 2021ರ ಡಿ.9ರಂದು ಲಿಖಿತ ಭರವಸೆಯನ್ನು ಪ್ರಧಾನ ಮಂತ್ರಿಗಳು ನೀಡಿದ್ದರು.

ದೇಶದ ಜನರ ಮುಂದೆ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದರು. ಆದರೆ, ಈವರೆಗೂ ಯಾವೊಂದು ಭರವಸೆ ಕೂಡ ಈಡೇರಿಲ್ಲ. ದೇಶದ ಪ್ರಧಾನಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ದೂರಿದರು. ಕನಿಷ್ಟ ಬೆಂಬಲ ಬೆಲೆ ಖಾತ್ರಿ ಸಂಬಂಧ ಸಮಿತಿ ರಚಿಸಲಾಗುವುದು. ಸಮಿತಿಯಲ್ಲಿ ರೈತ ಪ್ರತಿನಿಧಿ  ಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿತ್ತು.

ಆದರೆ, ಕೃಷಿ ಕಾಯ್ದೆಗಳ ಪರ ಇರುವವರನ್ನೇ ಹೆಚ್ಚು ಇರುವಂತೆ ಸಮಿತಿ ರಚಿಸಲಾಗಿದೆ. ಲಖಿಂಪೂರ ಕೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದವರ ಅಪರಾಧಿಗಳ ರಕ್ಷಣೆಗೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ನಿಂತಿರುವುದು ಖಂಡನೀಯ. ಘಟನೆಗೆ ಕಾರಣರಾದ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಮಂತ್ರಿ ಪದವಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ದೆಹಲಿ ಹೋರಾಟ ನಿರತ ರೈತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಬೇಕು. ಲಖೀಂಪುರ ಕೇರಿಯಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು, ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಕಾಯ್ದೆಗಳು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ರೈತ ವಿರೋಧಿ  ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Advertisement

ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ತ್ರಿಪೇಸ್‌ ವಿದ್ಯುತ್‌ ನೀಡಲಾಗುತ್ತಿಲ್ಲ. ಇಂಥ ಸಂಕಷ್ಟದಲ್ಲಿ ರೈತರು ಬೆಳೆ ಬೆಳೆಯುವುದೇ ಕಷ್ಟವಾಗುತ್ತಿದೆ. ಆದರೆ, ಸರ್ಕಾರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಕೆಗೆ ಮಸೂದೆ ಜಾರಿಗೆ ಮುಂದಾಗಿರುವುದು ಖಂಡನೀಯ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಟಿಎಲ್‌ಬಿಸಿಗೆ ನೀರು ಹರಿಸಿ ವಾರಗಳೇ ಕಳೆದರೂ ಕೊನೆ ಭಾಗಕ್ಕೆ ಒಂದು ಅಡಿ ಕೂಡ ನೀರು ಬರುತ್ತಿಲ್ಲ. ಪ್ರತಿ ವರ್ಷ ಇದೇ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಅಕ್ರಮ ನೀರಾವರಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಇದೇ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ದೊಡ್ಡ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಮುಖಂಡ ಚಾಮರಸ ಮಾಲಿಪಾಟೀಲ್‌, ಜಿಲ್ಲಾ ಸಂಚಾಲಕ ಕೆ.ಜಿ ವೀರೇಶ, ಜಿಂದಪ್ಪ ವಡೂರು, ಎಸ್‌.ಮಾರೆಪ್ಪ ವಕೀಲ, ಮುಖಂಡರಾದ ಪ್ರಭಾಕರ ಪಾಟೀಲ್‌ ಇಂಗಳದಾಳ, ಕುಮಾರ ಸಮತಳ, ಖಾಜಾ ಅಸ್ಲಾಂ ಪಾಷಾ, ಮಾರೆಪ್ಪ ಹರವಿ, ಆಂಜನೇಯ, ಡಿ.ಎಸ್‌ ಶರಣಬಸವ, ಎನ್‌.ಎಸ್‌ ವೀರೇಶ, ಜಿ. ಅಮರೇಶ, ರಂಗನಾಥ, ಸಿ.ಎಚ್‌ ರವಿಕುಮಾರ, ಕರಿಯಪ್ಪ ಅಚ್ಚೊಳ್ಳಿ, ಶ್ರೀನಿವಾಸ ಕಲವಲದೊಡ್ಡಿ,ಈ.ರಂಗನಗೌಡ, ಬಡೇಸಾಬ್‌, ಜಾನ್‌ ವೆಸ್ಲಿ, ಮಲ್ಲನಗೌಡ ಹಾಗೂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next