ಬೆಳಗಾವಿ: ಉತ್ತಮ ಗುಣಮಟ್ಟದ ಮರದ ದಿಮ್ಮಿಗಳನ್ನು ಸಾಗಿಸಲು ಬ್ರಿಟಿಷರು ದಾಂಡೇಲಿ (ಅಂಬೇವಾಡಿ) ಯಲ್ಲಿ ನಿರ್ಮಾಣ ಮಾಡಿದ್ದ ರೈಲುಮಾರ್ಗ ಇದುವರೆಗೆ ಪ್ರಯಾಣಿಕರ ರೈಲನ್ನೇ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಹುಬ್ಬಳ್ಳಿಯಿಂದ ಅಂಬೇವಾಡಿಯವರೆಗೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸಬೇಕು ಎಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಪಡಿಸಿದೆ.
ಈ ಸಂಬಂಧ ಶುಕ್ರವಾರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿದ ಹೋರಾಟ ಸಮಿತಿ ಮುಖಂಡರು, ದಾಂಡೇಲಿಯಿಂದ ಹುಬ್ಬಳ್ಳಿಯವರೆಗೆ ಪ್ರಯಾಣಿಕರ ರೈಲು ಆರಂಭಿಸಬೇಕು. ಇದಲ್ಲದೇ ಈಗಿರುವ ಅಂಬೇವಾಡಿ ರೈಲು ನಿಲ್ದಾಣವನ್ನು ದಾಂಡೇಲಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದರು.
ದಾಂಡೇಲಿ ನಗರದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ಮೊಟ್ಟಮೊದಲ ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ದಾಂಡೇಲಿಗೆ ಬರುತ್ತಿದ್ದ ಪ್ರಯಾಣಿಕರ ರೈಲನ್ನು ನಿಲ್ಲಿಸಲಾಯಿತು. ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳು ಪ್ರಯಾಣಿಕರ ರೈಲು ಪುನಾರಂಭಕ್ಕೆ ಯಾವುದೇ ಪ್ರಯತ್ನ ಮಾಡಲಿಲ್ಲ ಇದರಿಂದ ದಾಂಡೇಲಿ ಭಾಗದ ಜನರು ರೈಲು ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಹೋರಾಟ ಸಮಿತಿ ಮುಖಂಡರು ಹೇಳಿದರು.
ಹಿಂದಿನ ಕೇಂದ್ರ ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಸದಾನಂದ ಗೌಡ ಅವರು ಧಾರವಾಡದಿಂದ ದಾಂಡೇಲಿಗೆ ಪ್ರಯಾಣಿಕರ ರೈಲು ಮಾರ್ಗ ಘೋಷಣೆ ಮಾಡಿದ್ದರು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇದುವರೆಗೆ ದಾಂಡೇಲಿ (ಅಂಬೇವಾಡಿಗೆ) ಗೆ ಪ್ರಯಾಣಿಕರ ರೈಲು ಆರಂಭವಾಗಿಲ್ಲ. ಈ ಸಂಬಂಧ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈಗ ದಾಂಂಡೇಲಿಯಿಂದ ಬಸ್ ಮಾರ್ಗವಾಗಿ ಹುಬ್ಬಳ್ಳಿಗೆ ಬರಲು 75 ಕಿಮೀ ಕ್ರಮಿಸಬೇಕು. ಅದೇ ರೈಲು ಮಾರ್ಗ ಆರಂಭವಾದರೆ ಕನಿಷ್ಟ 20 ಕಿ ಮೀ ಉಳಿತಾಯವಾಗುತ್ತದೆ. ಪ್ರಯಾಣ ದರ ಕಡಿಮೆಯಾಗುವುದರಿಂದ ಬಡವರಿಗೆ ಬಹಳ ಅನುಕೂಲವಾಗಲಿದೆ. ಇದಲ್ಲದೇ ರೈಲು ಸಂಚಾರದಿಂದ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಸಹಾಯವಾಗಲಿದೆ ಎಂದು ಸಮಿತಿಯ ಮುಖಂಡರು ಹೇಳಿದರು.
ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಸುರೇಶ ಅಂಗಡಿ ಈ ಬಗ್ಗೆ ಪರಿಶೀಲನೆ ನಡೆಸಿ ಆದಷ್ಟು ಬೇಗ ಕ್ರಮ ಕೈಗೊಂಡು ದಾಂಡೇಲಿ ಜನರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಹೋರಾಟ ಸಮಿತಿ ಅಧ್ಯಕ್ಷ ಅಕ್ರಮ ಖಾನ್, ಅಶೋಕ ಪಾಟೀಲ, ಎಸ್.ಎಂ. ಪಾಟೀಲ, ಮಹೇಶ ಮೇತ್ರಿ, ಆರ್.ವಿ. ಗಡೆಪ್ಪನವರ ಹಾಜರಿದ್ದರು.