Advertisement

ನಿರ್ಲಕ್ಷ್ಯದಿಂದ ಜನಸಂಚಾರಕ್ಕೆ ಅಪಾಯಕಾರಿಯಾದ ರಾ.ಹೆ. 66: ಬಾವಾ

11:44 AM Sep 21, 2018 | |

ಸುರತ್ಕಲ್‌ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದರ ನಿರ್ಲಕ್ಷ್ಯದಿಂದ ಹೆದ್ದಾರಿ 66ರ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ ಕಡಿಮೆ ಅಂತರದಲ್ಲಿ ಮೂರು ಟೋಲ್‌ ಗೇಟ್‌ ಅಳವಡಿಸಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಮಾಜಿ ಶಾಸಕ ಮೊಯಿದಿನ್‌ ಬಾವಾ ಹೇಳಿದರು. ಸುರತ್ಕಲ್‌ ಟೋಲ್‌ ಗೇಟ್‌ ಮುಂಭಾಗ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಸುರತ್ಕಲ್‌-ಮಂಗಳೂರು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು, ದ್ವಿಚಕ್ರ ಸವಾರರು ಪ್ರಾಣ ಭಯದಿಂದ ಓಡಾಡುವಂತಾಗಿದೆ. ಮಳೆಗಾಲ ಮುಗಿದರೂ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿಲ್ಲ. ಸಂಸದರು ಈ ರಸ್ತೆಯಲ್ಲಿ ಓಡಾಟ ಹೆಚ್ಚಾಗಿ ನಡೆಸದ ಕಾರಣ ಅವರಿಗೂ ದುರಸ್ತಿಯಾಗದಿದ್ದರೂ ಚಿಂತೆಯಿಲ್ಲ ಎಂಬ ಭಾವನೆ ಇದ್ದಂತಿದೆ. ದುಬಾರಿ ಟೋಲ್‌ ಪಡೆಯುತ್ತಿದ್ದರೂ ಸೌಲಭ್ಯ ಮಾತ್ರ ರಸ್ತೆ ಬಳಕೆದಾರರಿಗೆ ಸಿಗುತ್ತಿಲ್ಲ. ಹೀಗಾಗಿ ಸುರತ್ಕಲ್‌ ಟೋಲ್‌ ಗೇಟನ್ನು ಮುಚ್ಚಬೇಕು ಎಂದು ಆಗ್ರಹಿಸಿದರು.

ಹೆದ್ದಾರಿಯ ಕುಂದಾಪುರದಿಂದ ಸುರತ್ಕಲ್‌ವರೆಗೆ ಕಾಮಗಾರಿ ವಿಳಂಬವಾಗಿದೆ ಮಾತ್ರವಲ್ಲ, ಸರ್ವೀಸ್‌ ರಸ್ತೆ, ಅಪಘಾತವಲಯದಲ್ಲಿ ಬದಲಾವಣೆ ಬಸ್‌ ನಿಲ್ದಾಣ ಮತ್ತಿತರ ಸೌಲಭ್ಯ ನೀಡದೆ ಟೋಲ್‌ಸಂಗ್ರಹ ನಡೆಸಲಾಗುತ್ತಿದೆ. ಇದು ಜನರ ಸುಲಿಗೆ ಎಂದು ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಸನಿಲ್‌ ಆಪಾದಿಸಿದರು.

ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಉತ್ತಮ ಸೌಲಭ್ಯ ಪಡೆಯಲು ಜನರ ಹೋರಾಟವೇ ಪ್ರಮುಖ ಅಸ್ತ್ರ . ಎಲ್ಲರೂ ಕೈ ಜೋಡಿಸಿದಾಗ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸಾಧ್ಯವಿದೆ ಎಂದರು.

ಹೋರಾಟದಿಂದ ಬೇಡಿಕೆ ಈಡೇರಿಕೆ
ಕಾಂಗ್ರೆಸ್‌ ಮುಖಂಡ ರಾಘವೇಂದ್ರ ರಾವ್‌ ಮಾತನಾಡಿ, ಕೂಳೂರು ಸೇತುವೆ ಬೀಳುವ ಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಜನರ ಪ್ರಬಲ ಹೋರಾಟದಿಂದ ಮಾತ್ರ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

Advertisement

ಎಸ್‌ಡಿಪಿಐ ಅಧ್ಯಕ್ಷ ಅತಾವುಲ್ಲ ಖಾನ್‌, ಕಾರ್ಪೊರೇಟರ್‌ಗಳಾದ ದೀಪಕ್‌ ಪೂಜಾರಿ, ಬಶೀರ್‌ ಅಹ್ಮದ್‌, ಅಶೋಕ್‌ ಶೆಟ್ಟಿ, ಪ್ರತಿಭಾ ಕುಳಾಯಿ, ಬಾಲಕೃಷ್ಣ ಶೆಟ್ಟಿ ಕೆಂಚನೂರು, ಟಿ.ಎನ್‌. ರಮೇಶ್‌, ಚಿತ್ತರಂಜನ್‌ ಭಂಡಾರಿ, ಮಹಾಬಲ ರೈ ಮುಕ್ಕ, ಬಶೀರ್‌ ಬೈಕಂಪಾಡಿ, ರಾಜೇಶ್‌ ಕುಳಾಯಿ, ಹಿಲ್ಡಾ ಆಳ್ವ, ರೇಶ್ಮಾ ಕಾಟಿಪಳ್ಳ, ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಬೇಡಿಕೆಗಳು
ಎಂಟು ವರ್ಷಗಳಿಂದ ಅಪೂರ್ಣಗೊಂಡ ಕಾಮಗಾರಿ ಪೂರ್ಣಗೊಳಿಸಿ, ಹೆದ್ದಾರಿಯಲ್ಲಿನ ಹೊಂಡ ಮುಚ್ಚಬೇಕು. ಟೋಲ್‌ ತೆರವು, ಚರಂಡಿ, ಬಸ್‌ ನಿಲ್ದಾಣ-ಅಂಡರ್‌ ಪಾಸ್‌ ನಿರ್ಮಾಣ, ದೀಪದ ವ್ಯವಸ್ಥೆ, ಅಪಾಯಕಾರಿ ಸ್ಥಳಗಳಲ್ಲಿ ಹೆದ್ದಾರಿ ನಿರ್ಮಾಣ ಪುನರ್‌ ವಿಮರ್ಶೆ, ಬದಲಾವಣೆ ಮತ್ತಿತರ ಬೇಡಿಕೆಯನ್ನು ಮಂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next