ಬೆಳಗಾವಿ: ಬೆಳಗಾವಿ ವಿಭಾಗದ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಕನ್ನಡ ಹಾಗೂ ತೃತೀಯ ಭಾಷೆ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿಯೇ ಮಾಡಿಸಬೇಕು ಎಂದು ಆಗ್ರಹಿಸಿ ಇಂಡಿಯನ್ ಮುಸ್ಲಿಂ ಲೀಗ್ ವತಿಯಿಂದ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ಅನುದಾನರಹಿತ ಶಾಲಾ ಶಿಕ್ಷಕರಿಂದ ಬೇಜವಾಬ್ದಾರಿ ಮೌಲ್ಯಮಾಪನ ನಡೆಯುತ್ತಿದ್ದು, ಹೀಗಾಗದಂತೆ ನಿಯಮ ರೂಪಿಸಬೇಕು. ಇದರಿಂದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇಂಥ ಮೌಲ್ಯಮಾಪನ ಸ್ಥಗಿತಗೊಳಿಸಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕಾರ್ಯ ಮಾಡಬೇಕು. ಬೆಳಗಾವಿ ವಿಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರ ಉರ್ದು, ಮರಾಠಿ ಮತ್ತುಇಂಗ್ಲಿಷ್ ಶಾಲೆಗಳು ಹೆಚ್ಚಾಗಿದ್ದು, ಈ ಮಕ್ಕಳ ಭವಿಷ್ಯದೃಷ್ಟಿಯಿಂದ ಮೌಲ್ಯಮಾಪನ ನಡೆಸಬೇಕು ಎಂದು ಆಗ್ರಹಿಸಿದರು.
Advertisement
ದ್ವಿತೀಯ ಭಾಷೆ ಕನ್ನಡ ಹಾಗೂ ತೃತೀಯ ಭಾಷೆ ಕಲಿಸುವ ಶಿಕ್ಷಕರಿಂದಲೇ ಮೌಲ್ಯಮಾಪನ ಮಾಡಿಸುವಂತಾಗಬೇಕು. ದಕ್ಷಿಣ ಕರ್ನಾಟಕದವರಾಗಲೀ ಅಥವಾ ಪ್ರಥಮ ಭಾಷೆ ಕನ್ನಡ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಬಾರದು. ಇದರಲ್ಲಿ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಮೌಲ್ಯಮಾಪನ ಸರಿಯಾಗಿ ಆಗುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.