ಮಹಾನಗರ: ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದ್ದು, ತರಹೇವಾರಿ ಪಟಾಕಿಗಳು ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಪಟಾಕಿ ಖರೀದಿಗೆ ಸಾರ್ವಜನಿಕರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ.
ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪಟಾಕಿ ಖರೀದಿ ಮತ್ತು ಪೂರೈಕೆ ಉತ್ತಮವಾಗಿರಲಿಲ್ಲ. ಇದೀಗ ಹಬ್ಬಕ್ಕೆ ಎರಡು ದಿನ ಇರುವಾಗಲೇ ಪಟಾಕಿ ಅಂಗಡಿಗಳಲ್ಲಿ ಹೆಚ್ಚಿನ ಜನ ಸಂದಣಿ ಇದ್ದು, ಪರಿಸರ ಸ್ನೇಹಿ ಹಸುರು ಪಟಾಕಿ ಖರೀದಿಗೆ ಜನರು ಆಸಕ್ತಿ ತೋರುತ್ತಿದ್ದಾರೆ. ನಗರದ ಅಂಗಡಿಗಳಿಗೆ ನಾನಾ ರೀತಿಯ ಪಟಾಕಿಗಳು ಈಗಾಗಲೇ ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪೂರೈಕೆಯಾಗುವ ನಿರೀಕ್ಷೆಯೂ ಇದೆ. ಕೆಲವು ಅಂಗಡಿಗಳಲ್ಲಿ ಪಟಾಕಿ ಖರೀದಿ ಮೇಲೆ ಉತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ.
ಬಣ್ಣ ಬಣ್ಣದ ಪಟಾಕಿಗಳು ಬೀಡಿ ಪಟಾಕಿ, ಮಳೆ, ಮಾಲೆ, ಬಾಣ ಪಟಾಕಿಗಳು, ರಾಕೆಟ್, ಹೂವಿನ ಕುಂಡಗಳು, ಕಲರ್ ಚೇಂಜಿಂಗ್ ಬಟರ್ ಫ್ಲೈ, ಡಕ್, ಲಯನ್, ಸ್ಟಾರ್ ಬರ್ಸ್ಡ್ ಕ್ರ್ಯಾಕಿಂಗ್ ಫ್ಲವರ್ ಪಾಟ್ ಸೇರಿದಂತೆ ಇನ್ನೂ ಅನೇಕ ಹೊಸ ಮಾದರಿಯ ಪಟಾಕಿಗಳು ಮಾರುಕಟ್ಟೆಯಲ್ಲಿದೆ. ಅಲ್ಲದೆ, “ವಿಂಗ್ಸ್ ಫೌಂಟೇನ್’, ಟೂ ಪ್ಲಸ್ ಒನ್ ಎಂಬ ಹೂದಾನಿ, ತ್ರಿವರ್ಣದ ಹೂದಾನಿ ಪಟಾಕಿ,ಬಟರ್‌ಫ್ಲೈ ಎಂಬ ಪಟಾಕಿ ಸೇರಿದಂತೆ ವಿವಿಧ ಮಾದರಿಯ ಪಟಾಕಿಗಳು ಮಾರುಕಟ್ಟೆಗೆ ಬಂದಿದೆ.
ಮಾಯಾ ಟ್ರೇಡರ್ ಮಾಲಕ ಅನಂತ್ ಕಾಮತ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಕಳೆದ ಕೆಲ ದಿನದಿಂದ ಪಟಾಕಿ ವ್ಯಾಪಾರ ಉತ್ತಮ ವಾಗಿದೆ. ಪರಿಸರ ಸ್ನೇಹಿ ಹಸುರು ಪಟಾಕಿ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಟಾಕಿ ವ್ಯಾಪಾರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಗಣಪತಿ ಭಂಡಾರ್‌ಕಾರ್ ಆ್ಯಂಡ್ ಸನ್ಸ್ ಮಾಲಕ ದಿಲೀಪ್ ಭಂಡಾರ್‌ಕರ್ ಅವರು ಪ್ರತಿಕ್ರಿಯಿಸಿ, ಪಟಾಕಿ ಮಾರಾಟ ಉತ್ತಮವಾಗಿದೆ. ಆದರೆ, ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಶಿವಕಾಶಿಯಲ್ಲಿ ಮಳೆ ಬಂದ ಪರಿಣಾಮ ಪಟಾಕಿ ಉತ್ಪಾದನೆ ತುಸು ಕಡಿಮೆಯಾಗಿದೆ. ಇದರಿಂದಾಗಿ ಪೂರೈಕೆಗೆ ತಕ್ಕಂತೆ ಉತ್ಪಾದನೆಯಾಗುತ್ತಿಲ್ಲ ಎಂದರು.
ಪಟಾಕಿ ಸಿಡಿಸಲು ಮಾರ್ಗಸೂಚಿ ಪಟಾಕಿ ಸಿಡಿಯುವಾಗ ಯಾವೆಲ್ಲ ಕ್ರಮಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 125ಡಿ.ಬಿ(ಎ.ಐ) ಅಥವಾ 145 ಡಿ.ಬಿ(ಸಿ)ಪಿ.ಕೆ ಕ್ಕಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದು. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪಟಾಕಿ ಬಳಕೆ ನಿಷೇಧಿಸಲಾಗಿದೆ. ನಿಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ ಸುತ್ತಮುತ್ತ ಪಟಾಕಿ ಸಿಡಿಸಬಾರದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.