Advertisement

ರೈತರಿಗೆ ವರವಾದ “ಡ್ರ್ಯಾಗನ್‌ ಫ್ರೂಟ್‌’

05:34 PM Mar 28, 2022 | Team Udayavani |

ಮುದಗಲ್ಲ: ಡ್ರ್ಯಾಗನ್‌ ಫ್ರೂಟ್‌ ಅನ್ನು ಇದೀಗ ಬಿಸಿಲು ನಾಡಲ್ಲೂ ಬೆಳೆಯಲಾಗುತ್ತಿದೆ. ಈ ಹಣ್ಣಿನ ಬೆಳೆ ಇಲ್ಲಿನ ರೈತರಿಗೆ ವರವಾಗಿ ಪರಿಣಮಿಸಿದೆ.

Advertisement

ನೀರು ಕಡಿಮೆ ಪ್ರಮಾಣವಿದ್ದರೂ ಬೆಳೆಯುತ್ತದೆ ಎಂಬ ಕಾರಣಕ್ಕೆ ಇಲ್ಲಿನ ಕನ್ನಾಳ, ದೇಸಾಯಿ ಭೋಗಾಪೂರ, ರಾಮಪ್ಪನ ತಾಂಡಾ, ಹಡಗಲಿ, ಮೆದಕಿನಾಳ ಹಾಗೂ ಮಟ್ಟೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಡ್ರಾÂಗನ್‌ ಫ್ರೂಟ್‌ ಬೆಳೆದು ಯಶಸ್ವಿಯಾಗಿದ್ದಾರೆ. ಅದಲ್ಲದೇ ಈ ಹಣ್ಣಿನ ಬೆಳೆಗೆ ಕಡಿಮೆ ನೀರು ಸಾಕು.

ಜಾಗತಿಕವಾಗಿ ಬೇಡಿಕೆ ಹೆಚ್ಚಿರುವುದರಿಂದ ಮಾರುಕಟ್ಟೆಯೂ ಸುಲಭ. ಸಾಂಪ್ರದಾಯಿಕ ಬೆಳೆ ಬೆಳೆದು ಕೈ ಸುಟ್ಟುಕೊಂಡಿರುವ ರೈತರು ಇದ್ದ ಅಲ್ಪ ಸ್ವಲ್ಪ ಬೋರಿನ ನೀರು ಬಳಸಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ಮುಂದಾಗಿದ್ದಾರೆ.

ಕನ್ನಾಳ ಗ್ರಾಮದ ಮೃತ್ಯುಂಜಯ ಎಂಬ ರೈತ ತನ್ನ ನಾಲ್ಕೈದು ಎಕರೆ ಭೂಮಿ ಯಲ್ಲಿ 2 ಎಕರೆಯಲ್ಲಿ ಎರಡೂವರೆ ಸಾವಿರ ಗಿಡಗಳನ್ನು ನಾಟಿ ಮಾಡಿದ್ದಾರೆ. ಗಿಡಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. 8-10ದಿನಗಳಿಗೊಮ್ಮೆ ನೀರುಣಿಸಿದರೆ ಸಾಕು. ತಿಪ್ಪೆ ಗೊಬ್ಬರ ಹಾಗೂ ಜೀವಾಮೃತ ನೀಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯೂ ಕಡಿಮೆ. ಗಿಡಗಳು ಹಚ್ಚ ಹಸಿರಾಗಿ ಬೆಳೆಯುತ್ತಿವೆ. ಆರಂಭದಲ್ಲಿಯೇ ಉತ್ತಮ ಫಸಲು ಬಂದಿದೆ. ಸುಮಾರು 5 ಟನ್‌ ಹಣ್ಣು ದೊರೆಯುತ್ತದೆ.

ಈಗ ಕೆ.ಜಿ ಹಣ್ಣಿಗೆ 120 ರಿಂದ 250 ಬೆಲೆ ಇದೆ ಡ್ರ್ಯಾಗನ್‌ ಫ್ರೂಟ್‌ ಗೆ ರಾಯಚೂರು, ಲಿಂಗಸಗೂರು, ಸಿಂಧನೂರು, ಮುದಗಲ್ಲ ಪಟ್ಟಣದಲ್ಲೂ ಮಾರುಕಟ್ಟೆಯಿದ್ದು, ಸ್ಥಳೀಯ ಮಾರುಕಟ್ಟೆ ಅಷ್ಟೇ ಅಲ್ಲ ಬೆಂಗಳೂರು, ಮುಂಬೈ, ಪುಣೆ, ಗೋವಾ, ಮಂಗಳೂರು, ಚೆನ್ನೈ ನಗರಗಳಿಗೆ ಹಣ್ಣುಗಳನ್ನು ರವಾನಿಸಲಾಗುತ್ತಿದೆ.

Advertisement

ಡ್ರ್ಯಾಗನ್‌ ಫ್ರೂಟ್‌ ಕಳ್ಳಿ ಜಾತಿಗೆ ಸೇರಿದ ಸಸ್ಯ ಹೆಚ್ಚು ನೀರು ಬೇಡವಾದ, ರೋಗಬಾಧೆ ಕಾಡದ ಬೆಳೆ ಆಗಿದೆ. ಹಣ್ಣುಗಳು ಹುಳಿ ಮತ್ತು ಸಿಹಿ ಮಿಶ್ರಿತವಾಗಿರುತ್ತದೆ. ಈ ಹಣ್ಣು ಬಳಸುವುದರಿಂದ ಅಧಿಕ ಪೋಷಕಾಂಶಗಳು ಸಿಗುತ್ತವೆ. ಇದನ್ನು ಹೆಚ್ಚಾಗಿ ಔಷಧ ತಯಾರಿಕೆಗೆ ಬಳಸಲಾಗುತ್ತದೆ ಎಂದು ರೈತ ಮೃತ್ಯುಂಜಯ್ಯ ಪತ್ರಿಕೆಗೆ ತಿಳಿಸಿದರು.

ಹೊಲದಲ್ಲಿ ಕಲ್ಲು ಅಥವಾ ಸಿಮೆಂಟ್‌ ಕಂಬಗಳನ್ನು ಹಾಕಿ ಕಳ್ಳಿ ಜಾತಿಯ ಈ ಸಸ್ಯ ಅಂಟಿಸುತ್ತಾರೆ. ಕಂಬದ ಜತೆಗೆ ಬೆಳೆದು ನಿಲ್ಲುವ ಸಸ್ಯ ಕೆಲ ದಿನಗಳ ನಂತರ ದ್ವಿಚಕ್ರವಾಹನಗಳ ಟಾಯರ್‌ ಗಳನ್ನು ಹಾಕಿ ಇಳುವರಿ ಹೆಚ್ಚು ಬರುವಂತೆ ಮಾಡುತ್ತಾರೆ ಎನ್ನುತ್ತಾರೆ ಡ್ರ್ಯಾಗನ್‌ ಫ್ರೂಟ್‌ ಬೆಳೆಗಾರರು.

ಈ ಬೆಳೆ ಬೆಳೆಯುವ ರೈತರಿಗೆ ಇಲಾಖೆ ಅಥವಾ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಕಡಿಮೆ ಕೂಲಿಕಾರರು ಮತ್ತು ಕಡಿಮೆ ನೀರು ಬಳಸಿ ಬೆಳೆಯುವ ಬೆಳೆಯಾಗಿದ್ದರಿಂದ ಸಣ್ಣ ರೈತರು ಈ ಬೆಳೆಯನ್ನು ಬೆಳೆಯಬಹುದಾಗಿದೆ. -ಜಗದೀಶ, ತೋಟಗಾರಿಕೆ ಇಲಾಖೆ ಅಧಿಕಾರಿ ಲಿಂಗಸುಗೂರು

-ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next