Advertisement

ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಆಗ್ರಹ 

05:32 PM Nov 09, 2018 | |

ಮಹಾಲಿಂಗಪುರ: ರಾಜ್ಯ ಸರ್ಕಾರ ಮರಳು ಗಣಿಗಾರಿಕೆಗೆ ಪರವಾನಗಿ ಕೊಟ್ಟಿದ್ದು, ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿಗೆ ಹಣ ಪಡೆದು ಮರಳು ಮಾರಾಟ ಮಾಡುತ್ತಿರುವ ಮಾಲೀಕರ ಲೈಸೆನ್ಸ್‌ ರದ್ದುಗೊಳಿಸಬೇಕು. ಇಲ್ಲವೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಮರಳು ಮಾರಾಟ ಮಾಡುವಂತೆ ಸರ್‌.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿವೆ.

Advertisement

ರೈತ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ ಬಂಡಿವಡ್ಡರ, ಬದಾಮಿಯಲ್ಲಿ ಈ ಮರಳು ಮಾರಾಟಕ್ಕೆ ಸರ್ಕಾರ ಕೆಲವು ಮಾಲೀಕರಿಗೆ ಪರವಾನಗಿ ನೀಡಿದೆ. ಅವರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಯಾವುದೇ ಸರ್ಕಾರಿ ರಸೀದಿ ಅಥವಾ ಬಿಲ್‌ ಇಲ್ಲ. ಸಾರ್ವಜನಿಕರು, ಟಿಪ್ಪರ್‌ ಮಾಲೀಕರು ಬಿಲ್‌ ಕೇಳಿದರೂ ಅವರು ಕೊಡುವುದಿಲ್ಲ. ಅದರ ಬದಲಾಗಿ ಸರ್ಕಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿದ ಪರಮಿಟ್‌ ಪತ್ರ ಮಾತ್ರ ನೀಡಿ ಬಿಲ್‌ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರ 12 ಟನ್‌ಗೆ 5,760 ರೂ. ನಿಗದಿ ಪಡಿಸಿದ್ದರೆ ಮರಳು ಮಾರಾಟ ಪರವಾನಗಿ ಪಡೆದ ಮಾಲೀಕರು ಮಾತ್ರ 14 ಸಾವಿರ ರೂ. ಹಣ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟು ಹಣ ಕೊಂಡು ತಂದ ಮರಳನ್ನು ಸಾರ್ವಜನಿಕರಿಗೆ 22-26 ಸಾವಿರದ ವರೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಟಿಪ್ಪರ್‌ ಮಾಲೀಕರು. ಟಿಪ್ಪರ್‌ ಮಾಲೀಕರು ಬಿಲ್‌ ಕೇಳಿದರೂ ಮರಳು ಲೈಸೆನ್ಸ್‌ ಮಾಲೀಕರು ಯಾವುದೇ ಬಿಲ್‌ ಕೊಡುವುದಿಲ್ಲವೆಂದು ಹೇಳಿ ನಾಳೆಯಿಂದ ನಮ್ಮ ಹತ್ತಿರ ಮರಳು ತೆಗೆದುಕೊಳ್ಳಲು ಬರಬೇಡಿ ಎಂದು ಗದರಿಸುತ್ತಾರೆ ಎಂದರು.  ಈ ಬಗ್ಗೆ ಬಾಗಲಕೋಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ಅ.23ರಂದು ಮನವಿ ಕಳಿಸಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ. ಸರ್ಕಾರ ನಿಗದಿಪಡಿಸಿದ ದರದಲ್ಲಿ ಮರಳು ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಎಲ್ಲ ಸಂಘಟನೆಗಳು ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ರೈತ ಸಂಘದ ಸಂಚಾಲಕ ಗಂಗಾಧರ ಮೇಟಿ, ಪರಸಪ್ಪ ನಸಲಾಪುರ, ತಿಪ್ಪಣ್ಣ ಬಂಡಿವಡ್ಡರ, ಕರೆಪ್ಪ ಮೇಟಿ, ಮಲ್ಲಪ್ಪ ನಸಲಾಪುರ, ಶ್ರೀಕಾಂತ ಗುಳನ್ನವರ, ಬಂದು ಪಕಾಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next