Advertisement

ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಆಗ್ರಹ

11:14 AM Jan 31, 2019 | |

ರಾಮನಗರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನೌಕರರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದ (ಡೀಸಿ ಕಚೇರಿ) ಮುಂಭಾಗ ಧರಣಿ ಪ್ರತಿಭಟನೆ ನಡೆಸಿದ ಅಧಿಕಾರಿಗಳು ಮತ್ತು ನೌಕರರು ಕೇರಳ ರಾಜ್ಯವನ್ನು ಮಾದರಿಯಾಗಿಟ್ಟುಕೊಂಡು ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಸೇವಾ ಭದ್ರತೆ, ಪಿಂಚಣಿ, ವೇತನ ಶ್ರೇಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ತಮಗೂ ನೀಡಬೇಕು. ಈಗಾಗಲೇ ಹಲವು ಬಾರಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘ ಸರ್ಕಾರ- ಜನರ ನಡುವೆ ಸೇತುವೆ: ಈ ವೇಳೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿಂ.ಲಿಂ.ನಾಗರಾಜ್‌ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪತ್ತಿನ ಸಹಕಾರ ಸಂಘಗಳು ರಾಜ್ಯ ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ, ಸರ್ಕಾರಗಳು ಮಾತ್ರ ಸಹಕಾರ ಸಂಘ ಮತ್ತು ಸಿಬ್ಬಂದಿಯನ್ನು ನಿರ್ಲಕ್ಷ್ಯ ಭಾವನೆಯಿಂದ ನೋಡುತ್ತಿವೆ ಎಂದು ದೂರಿದರು.

ಸೌಲಭ್ಯವಿಲ್ಲದೇ ಜೀವನ ಕಷ್ಟ: ಪಡಿತರ, ರಸಗೊಬ್ಬರ ವಿತರಣೆ ಮತ್ತು ಬ್ಯಾಂಕಿಂಗ್‌ ವ್ಯವಹಾರ ಸೇವೆಗಳನ್ನು ಸಹಕಾರ ಸಂಘಗಳ ಉದ್ಯೋಗಿಗಳು ರೈತರ ಮನೆಬಾಗಿಲಿನಲ್ಲೇ ಕೊಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳ ಮೂಲಕ ನೌಕರರು ರೈತರ ಆರ್ಥಿಕ ಅಭಿವೃದ್ಧಿಗೆ ಸಾಲ ಸೌಲಭ್ಯ, ವ್ಯವಸಾಯೋಪಕರಣ, ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ, ಬೆಳೆ ವಿಮೆ, ಸರ್ಕಾರದ ಸಹಾಯ ಧನ, ಸಾಲಮನ್ನಾ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ದುಡಿಯುತ್ತಿದ್ದಾರೆ. ಅವರ ಸೇವೆಗೆ ತಕ್ಕಂತೆ ವೇತನ ಮತ್ತು ಸವಲತ್ತುಗಳು ಇಲ್ಲದಿರುವುದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ಸರ್ಕಾರಿ ನೌಕರರಿಗೆ ಸಿಗುವ ವೇತನ, ಸವಲತ್ತು ಇವರಿಗೂ ಕೊಡಿ ಎಂದು ಆಗ್ರಹಿಸಿದರು.

ಮಾನವ ಸರಪಳಿ ರಚಿಸಿ ಹೆದ್ದಾರಿ ರಸ್ತೆ ತಡೆ: ಡೀಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಮುನ್ನ ಪ್ರತಿಭಟನಾಕಾರರು, ನಗರದ ಮಿನಿ ವಿಧಾನಸೌಧದಿಂದ ಪ್ರತಿಭಟನೆಯ ಸೂಚ್ಯಕವಾಗಿ ಮೆರವಣಿಗೆ ನಡೆಸಿದರು. ಐಜೂರು ವೃತ್ತದಲ್ಲಿ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. ಪ್ರತಿಭಟನಾಕಾರರು ನೀಡಿದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ಪ್ರಶಾಂತ್‌ ಸ್ವೀಕರಿಸಿದರು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶ್ವಥ್‌, ಕಸ್ತೂರಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಯ್ಯ, ಪ್ರಕಾಶ್‌, ಹನುಮಂತ, ನಂದೀಶ್‌, ಪ್ರಕಾಶ್‌, ಚಂದ್ರು, ಶಿವರಾಮಯ್ಯ, ರೇಣುಕಪ್ಪ, ಅಶ್ವತ್ಥ್, ನಾಗರಾಜು ಸೇರಿದಂತೆ ಜಿÇ್ಲೆಯ ನಾಲ್ಕು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು.

ಸರ್ಕಾರಕ್ಕೆ 3 ತಿಂಗಳ ಗಡುವು
ರಾಜ್ಯದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ರೈತರು, ಕಾರ್ಮಿಕರು, ಬಡವರ ಪರವಾದ ಸರ್ಕಾರ ಎಂದು ಬಾಯಿ ಮಾತಿಗೆ ಹೇಳಿದರೆ ಆಗುವುದುಲ್ಲ. ಸಹಕಾರ ಸಂಘಗಳ ನೌಕರರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಸರ್ಕಾರ ಮೂರು ತಿಂಗಳ ಅವಧಿಯೊಳಗೆ ಸಹಕಾರ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಸಹಕಾರ ಕ್ಷೇತ್ರದ ನಿರ್ದೇಶಕರು ಸಹ ನೌಕರರೊಂದಿಗೆ ಹೋರಾಟಕ್ಕೆ ಬೀದಿಗಿಳಿಯುವುದಾಗಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿಂ.ಲಿಂ.ನಾಗರಾಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next