ಗೋಕಾಕ: ನೆರೆಹಾವಳಿಗೆ ಹಾನಿ ಅನುಭವಿಸಿದ ವ್ಯಾಪಾರಸ್ಥರ ಹಾನಿ ಕುರಿತು ಇಲ್ಲಿಯ ಜೆಸಿಐ ಸಂಸ್ಥೆ ನಡೆಸಿದ ಸಮೀಕ್ಷೆ ಆಧಾರದ ಮೇಲೆ ವ್ಯಾಪಾರಸ್ಥರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಧನ ನೀಡುವಂತೆ ಆಗ್ರಹಿಸಿ ವ್ಯಾಪಾರಸ್ಥರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಈಗಾಗಲೇ ಸರ್ಕಾರ ವ್ಯಾಪಾರಸ್ಥರಿಗೆ 25000 ರೂ. ಪರಿಹಾರ ಧನ ಘೋಷಿಸಿದ್ದಾರೆ. ಆದರೆ ವಾಸ್ತವವಾಗಿ ಹಾನಿಗೆ ಒಳಗಾದ ವ್ಯಾಪಾರಸ್ಥರ ಬದುಕು ಶೋಚನೀಯವಾಗಿದೆ. ಬಹುತೇಕ ವ್ಯಾಪಾರಸ್ಥರು ವಾಣಿಜ್ಯ ಬ್ಯಾಂಕುಗಳು ಮತ್ತು ಖಾಸಗಿ ವ್ಯಕ್ತಿಗಳ ಕಡೆಗೆ ಲಕ್ಷಾಂತರ ರೂಪಾಯಿಗಳ ಸಾಲ ಮಾಡಿ ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದು, ಈಗ ಅವರೆಲ್ಲರೂ ಈ ಸಾಲವನ್ನು ತೀರಿಸಲಾರದ ದುಸ್ಥಿತಿಗೆ ಒಳಗಾಗಿದ್ದಾರೆ ಎಂದರು.
ಇಂತಹ ಸಂದರ್ಭದಲ್ಲಿ ವ್ಯಾಪರಸ್ಥರು ಹಾನಿಗೆ ಒಳಗಾದ ಪ್ರಮಾಣಕ್ಕೆ ಪೂರಕವಾದ ಹೆಚ್ಚುವರಿ ಧನಸಹಾಯ ಸರಕಾರದಿಂದ ನೀಡಿದಾಗ ಮಾತ್ರ ಅವರು ತಮ್ಮ ಉದ್ಯೋಗ ಮುಂದುವರಿಸಲು ಸಾಧ್ಯವಾಗುತ್ತದೆ. ಈಗಾಗಲೇ ನಗರದ ಸೇವಾ ಸಂಸ್ಥೆಗಳು ಖುದ್ದಾಗಿ ಸಮೀಕ್ಷೆ ನಡೆಸಿ ವಾಸ್ತವ ವರದಿಯನ್ನು ಮನವಿ ಮುಖಾಂತರ ಸಲ್ಲಿಸಲಾಗಿದ್ದು, ಸರ್ಕಾರ ಕೂಡಲೇ ಪೂರಕವಾದ ಕ್ರಮ ಜರುಗಿಸಿ ಸೂಕ್ತ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.
ನ್ಯಾಯವಾದಿ ವಿಷ್ಣು ಲಾತೂರ ಮಾತನಾಡಿ, ನಗರದಲ್ಲಿ ನೆರೆಯಿಂದ ಹಾನಿಗೊಳಗಾದ ವ್ಯಾಪಾರಸ್ಥರ ಸಂಪೂರ್ಣ ವಿವರಣೆಯನ್ನು ಖುದ್ದಾಗಿ ಪರಿಶೀಲಿಸಿ ಸಮೀಕ್ಷೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಟ್ಟು ಹಾನಿಗೊಳಗಾದ 410 ವ್ಯಾಪಾರಸ್ಥರ ಅಂಗಡಿಗಳಿಗೆ ಭೇಟಿಯಾಗಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಅದರ ಸಂಪೂರ್ಣ ವಿವರಣೆಯನ್ನು ಅವರ ವೈಯಕ್ತಿಕ ಅರ್ಜಿಯ ಜೊತೆಗೆ ಮುಖ್ಯಮಂತ್ರಿಗೆ ಮನವಿ ಮೂಲಕ ವಿವರಿಸಲಾಗಿದೆ ಎಂದರು.
ಈ ವೇಳೆ ಜೆ.ಸಿ.ಐ. ಸಂಸ್ಥೆಯ ಅಧ್ಯಕ್ಷ ಮಹಾವೀರ ಖಾರೇಪಠಾಣ, ವಲಯ ನಿರ್ದೇಶಕ ಕೆಂಪಣ್ಣ ಚಿಂಚಲಿ, ರಜನಿಕಾಂತ ಮಾಳ್ಳೋದೆ, ಸಂತೋಷ ಖಂಡ್ರೆ, ರವಿ ಮಾಲದಿನ್ನಿ, ಸುಭಾಸ ಘಸ್ತಿ, ಅಶೋಕ ಕುರಬೇಟ, ವಿಜಯಕುಮಾರ ಖಾರೇಪಠಾಣ, ರಾಜಶೇಖರ ಕೋಕ್ಕರಿ ಸೇರಿದಂತೆ ಇತರರು ಇದ್ದರು.