ರಾಮದುರ್ಗ: ರೈತರ ವಿವಿಧ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದಿಂದ ತಹಶೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ ಮಾತನಾಡಿ, ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ, ಜಾನುವಾರುಗಳಿಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೋಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಬ್ಯಾಂಕುಗಳು ರೈತರಿಗೆ ನೋಟಿಸ್ ನೀಡಿ ಸಮನ್ಸ್ ಜಾರಿ ಮಾಡಿ ರೈತರನ್ನು ಆತ್ಮಹತ್ಯೆ ದಾರಿಯತ್ತ ತಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರೈತರಿಗರ ಬ್ಯಾಂಕನಿಂದ ನೋಟಿಸ್ ಬರುವದನ್ನು ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನೋಟಿಸ್ ಬಂದು ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನೇರವಾಗಿ ತಾಲೂಕು ಆಡಳಿತವೇ ಕಾರಣವಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಲೀಜ್ ಪಡೆದ ಪ್ಯಾರಿ ಶುಗರ್ ಕಾರ್ಖಾನೆಯವರು 2018-19ರ ಪ್ರಕಾರ ಎಫ್.ಆರ್.ಪಿ ಪ್ರಕಾರ ಹಣ ಸಂದಾಯ ಮಾಡಬೇಕು. ಟ್ರ್ಯಾಕ್ಟರ ಮತ್ತು ಗ್ಯಾಂಗಿನ ಹಣವನ್ನು ತಕ್ಷಣ ನೀಡಲು ಆದೇಶ ಮಾಡಬೇಕು. ತಪ್ಪಿದಲ್ಲಿ ತಮ್ಮ ಇಲಾಖೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಅಲ್ಲದೇ ತಾಲೂಕಿನಲ್ಲಿ ಹೆಸ್ಕಾಂ ಇಲಾಖೆಯವರು ವಿಫಲಗೊಂಡ ಟಿಸಿಯನ್ನು ಕೆ.ಎ.ಆರ್.ಸಿ ನಿಯಮದ ಪ್ರಕಾರ ನೀಡುತ್ತಿಲ್ಲ. ಇದನ್ನು ಸರಿಪಡಿಸಬೇಕು. ತಾಲೂಕಿನಾದ್ಯಾಂತ ವಿದ್ಯುತ್ ವಾಯರ್ ಜೋತು ಬಿದ್ದಿದ್ದು, ಅಲ್ಲದೆ ಕಂಬಗಳು ಬಾಗಿವೆ. ಶೀಘ್ರವೇ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ, ಯಲ್ಲಪ್ಪ ದೊಡಮನಿ, ನೂರಸಾಬ ಕಡಕೋಳ, ಹಸಿರು ಸೇನೆ ಅಧ್ಯಕ್ಷ ಶಿವಾನಂದ ದೊಡವಾಡ, ಮುಖಂಡರಾದ ಎಂ.ಪಿ. ತ್ಯಾವಟಗಿ, ಮಹ್ಮದಸಾಬ ದಾನಕಟಗಿ, ಮಂಜುನಾಥ ದೇಸಾಯಿ, ಮಲ್ಲಿಕಾರ್ಜುನ ದೇಸಾಯಿ, ಶಿವನಗೌಡ ಪಾಟೀಲ, ನಾಗಪ್ಪ ಮಾಯನ್ನವರ, ವಿಠuಲ ಹಳ್ಳಿ ಇತರರು ಇದ್ದರು.