Advertisement

ಜಿಲ್ಲೆಯಲ್ಲಿ ತಂಪು ಪಾನಿಯಗಳಿಗೆ ಬೇಡಿಕೆ

01:05 PM Mar 15, 2022 | Team Udayavani |

ದೇವನಹಳ್ಳಿ: ಬೆಂ.ಗ್ರಾ ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈಬೆವರನ್ನು ಇಳಿಸುತ್ತಿದ್ದಾನೆ. ಇದರಿಂದ ಜನರು ಸುಸ್ತಾಗಿ ದಾಹ ನೀಗಿಸಿಕೊಳ್ಳಲು ತಂಪು ಪಾನೀಯ, ಕಬ್ಬಿನ ಹಾಲು, ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ರಸದ ಮೊರೆಹೋಗಿದ್ದಾರೆ.

Advertisement

ಬಿಸಿಲಿನ ಜೊತೆಗೆ ಬಿಸಿ ಗಾಳಿಯೂ ಸಹ ಜನರನ್ನು ತತ್ತರಿಸುವಂತೆ ಮಾಡಿದೆ. ನಾಗರಿಕರು ಬಿಸಿಲಿನ ತಾಪಕ್ಕೆ ಧಣಿವಾರಿಸಲು ಎಳೆನೀರು ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ಬೇಸಿಗೆ ಬಂದರೆ ಸಾಕು ಜನರು ಎಳೆನೀರಿನ ಮೊರೆಹೋಗಿ ದೇಹ ತಂಪು ಮಾಡಿಕೊಳ್ಳುವುದು ಸಹಜ. ಆದರೆ, ಎಳೆನೀರಿನ ಬೆಲೆ ಹೆಚ್ಚಾಗಿದ್ದರೂ, ಬಿಸಿಲಿನ ತಾಪವನ್ನು ತಗ್ಗಿಸಿಕೊಳ್ಳಲು ಜನತೆ ಆರೋಗ್ಯದಾಯಕ ಎಳೆನೀರಿನ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ತಂಪು ಪಾನಿಯ ಹಾಗೂ ಕಬ್ಬಿನ ರಸಕ್ಕೆ ಮೊರೆ ಹೋಗುತ್ತಿದ್ದಾರೆ. ಈ ಬಾರಿ ರಣ ಬಿಸಿಲಿನಿಂದ ನೆತ್ತಿ ಸುಡುತ್ತಿದ್ದು, ಬಿಸಿಲಿನ ತಾಪ ಮತ್ತಷ್ಟು ತೀವ್ರಗೊಳ್ಳಲಿದೆ.

ಬೆಳಗ್ಗೆ 7.30ರ ವೇಳೆಯಲ್ಲಿರುವ ಎಳೆ ಬಿಸಿಲು ಜನರ ಮೈಸುಡಲು ಪ್ರಾರಂಭಿಸುತ್ತದೆ. ಸಂಜೆ 5 ಗಂಟೆಯವರೆಗೂ ಬಿಸಿಲಿನ ಜಳ ಇರುವುದರಿಂದ ಮೈ, ಚರ್ಮದ ಜೊತೆ ಬಾಯಿ ಹೊಣಗುವ ಅನುಭವವಾಗುತ್ತದೆ. ಬಿಸಿಲಿನ ತಾಪದ ತೀವ್ರತೆಗೆ ಜನರು ತಂಪು ಪಾನಿಯ, ಪಾನಕ, ಮಜ್ಜಿಗೆ ಎಳೆನೀರು ಕಡೆ ವಾಲುತ್ತಿದ್ದಾರೆ.

ಮಜ್ಜಿಗೆಗೆ ಸಾಕಷ್ಟು ಬೇಡಿಕೆ: ಬೇಕರಿ, ಹೋಟೇಲ್‌ ಗಳಲ್ಲಿ ತಂಪು ಪಾನಿಯಗಳ ಮಾರಾಟ ಗಣನೀಯವಾಗಿ ಕಾಣುತ್ತದೆ. ಮಜ್ಜಿಗೆಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದೆ. ಬಿಸಿಲಿನ ತಾಪ ಹೆಚ್ಚಾದಂತೆ ರೋಗ-ರುಜಿನುಗಳು ಮನೆ ಮಾಡುತ್ತವೆ. ರಸ್ತೆ ಬದಿಯಲ್ಲಿ ಮಜ್ಜಿಗೆ ಹಾಗೂ ಹೆಸರುಬೇಳೆ, ಕೋಸಂಬರಿ ಮಾರಾಟದ ಅಂಗಡಿಗಳು ತಲೆಎತ್ತುತ್ತಿವೆ. ಕತ್ತರಿಸಿಟ್ಟ ಹಣ್ಣುಗಳು ಯತೇತ್ಛವಾಗಿ ದೊರೆಯುತ್ತಿದೆ. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಬಿಸಿಲಿನ ತಾಪಮಾನ 34ರಿಂದ 36 ಡಿಗ್ರಿ ವರೆಗೆ ಏರಿದೆ. ಬಿಸಿಲ ಝಳಕ್ಕೆ ಮಧ್ಯಾಹ್ನದ ವೇಳೆ ರಸ್ತೆಗೆ ಇಳಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ.

Advertisement

ಎಳೆನೀರಿನ ಬೆಲೆ 30 ರೂ.: ಎಳೆನೀರನ್ನು ಮಾರುವವರು ವಿವಿಧ ತೋಟಗಳಿಗೆ ತೆರಳಿ ಬೆಳಗಿನ ಜಾವ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಮಾರುಕಟ್ಟೆಯಲ್ಲಿ ಒಂದು ಎಳೆನೀರಿನ ಬೆಲೆ 30 ರೂ. ಗಳವರೆಗೆ ಮಾರಾಟವಾಗುತ್ತಿದೆ. ಎಳನೀರು ಮಾನವನ ದೇಹಕ್ಕೆ ಬಹು ಮುಖ್ಯವಾದ ಲವಣಾಂಶ ಒಳಗೊಂಡಂತಹ ಪೇಯವಾಗಿದೆ. ಇದರಲ್ಲಿ ಹೆಚ್ಚು ಪೋಟಾಷಿಯಂ ಇರುವ ಕಾರಣ ಹೈಪರ್‌ಟೆಂಕ್ಷನ್‌ ಕಡಿಮೆ ಮಾಡಲು ಸಹಕಾರಿಯಾಗಿದೆ. ಉತ್ತಮ ಕೊಲೆಸ್ಟ್ರಾಲ್‌ ವೃದ್ಧಿ ಮಾಡುವ ಅಂಶವಾಗಿದೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಅಂಗಾಂಗಗಳಲ್ಲಿ ಟಾಕ್ಸಿನ್‌ ದೂರವಾಗಿ ಎಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ನಿಯಮಿತವಾಗಿ ಎಳೆನೀರು ಸೇವಿಸುವುದರಿಂದ ಕಿಡ್ನಿ ಸ್ಟೋನ್‌ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

ಮಜ್ಜಿಗೆ ಮತ್ತು ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ 10 ರೂ. ಹಾಗೂ ಕಬ್ಬಿನ ಹಾಲಿಗೆ 20 ರೂ., ಮೋಸಂಬಿ ಮತ್ತು ಪೈನ್‌ ಆಪಲ್‌ ಜ್ಯೂಸ್‌ ಗಳಿಗೆ 40 ರೂ., ಆಫ‌ಲ್‌ ಜ್ಯೂಸಿಗೆ 50 ರೂ., ಸಫೋಟ ಜ್ಯೂಸಿಗೆ 45 ರೂ., ಡ್ರೈಪ್ರೂಟ್ಸ್‌ ಜ್ಯೂಸಿಗೆ 65 ರೂ. ಬೆಲೆ ಮಾರಾಟವಾಗುತ್ತಿದೆ.

ತೆಂಗಿನ ತೋಟ ಮಾಡಲು ಪ್ರೋತ್ಸಾಹ: ದೇವನಹಳ್ಳಿಯಲ್ಲಿ ತೆಂಗಿನ ತೋಟಗಳ ಸಂಖ್ಯೆಯಲ್ಲಿ ಜಿಲ್ಲೆಯಲ್ಲೇ ಅತೀ ಕಡಿಮೆ ಪ್ರದೇಶವನ್ನು ಹೊಂದಿದೆ. ಜಿಲ್ಲೆಯ ನಾಲ್ಕು ತಾಲೂಕಿನ ಪೈಕಿ ತೆಂಗಿನ ತೋಟಗಳ ಸಂಖ್ಯೆ ನೆಲಮಂಗಲ 1850 ಹೆಕ್ಟೇರು, ದೊಡ್ಡಬಳ್ಳಾಪುರ 875 ಹೆಕ್ಟೇರು, ಹೊಸಕೋಟೆ 255 ಹೆಕ್ಟೇರು, ದೇವನಹಳ್ಳಿ 269 ಹೆಕ್ಟೇರು, ಒಟ್ಟು 3249 ಹೆಕ್ಟೇರುಗಳನ್ನು ಹೊಂದಿದೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ತೆಂಗಿನ ತೋಟ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದ್ದು, ತೆಂಗಿನ ತೋಟದಲ್ಲಿ ಪಾವತಿ ಮಾಡಲು, ಕಾಯಿ ತೆಗೆಯಲು ಕೂಲಿಗಾರರಿಗೆ ಇಂತಿಷ್ಟು ಹಣವನ್ನು ನೀಡಲಾಗುತ್ತಿದೆ. ಉದ್ಯೋಗ ಚೀಟಿಯನ್ನು ಹೊಂದಿರುವ ತೆಂಗಿನ ತೋಟದ ಫ‌ಲಾನುಭವಿಗಳು ನೆರೆಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಒಂದು ಹೆಕ್ಟೇರ್‌ನಲ್ಲಿ ಕೂಲಿಕಾರರಿಗೆ 48801 ರೂ. ಹಾಗೂ ಸಾಮಗ್ರಿ ವೆಚ್ಚ 17679 ರೂ. ಒಟ್ಟು 66480 ರೂ.ಗಳನ್ನು ನೀಡಿ ಪ್ರೋತ್ಸಾಹಿ ಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಎಳೆನೀರಿಗೆ ಬೇಡಿಕೆ ಹೆಚ್ಚಾಗಿದೆ.    ಕಳೆದ 36 ವರ್ಷದಿಂದ ಎಳೆನೀರು ವ್ಯಾಪಾರ ಮಾಡಲಾಗುತ್ತಿದೆ. ಆಸ್ಪತ್ರೆಯಿಂದ ಬರುವ ರೋಗಿಗಳು, ಗರ್ಭಿಣಿ, ವೃದ್ಧರಿಗೆ 25 ರೂ. ಬೆಲೆಯಲ್ಲಿ ಎಳೆನೀರನ್ನು ನೀಡುತ್ತಿದ್ದೇವೆ. ತಾಲೂಕಿನ ಮತ್ತು ಜಿಲ್ಲೆಯ ಅಕ್ಕಪಕ್ಕದ ತೋಟಗಳಿಂದ ಎಳೆನೀರನ್ನು ಖರೀದಿಸಿ ತರಲಾಗುತ್ತಿದೆ. ಜನರ ಬಾಯಾರಿಕೆ ತೀರಿಸಬೇಕಾದರೆ ಅದು ಎಳೆನೀರಿನಿಂದ ಸಾಧ್ಯ. – ಮುನಿರಾಜು, ಎಳೆನೀರು ವ್ಯಾಪಾರಿ, ದೇವನಹಳ್ಳಿ

ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಮಧ್ಯಾಹ್ನದ ವೇಳೆಯಂತೂ ಮರದ ನೆರಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ತಲೆಯಲ್ಲಿ ಹೊರಗಡೆ ಹೋದರೆ, ಬಿಸಿಲಿನ ತಾಪಕ್ಕೆ ತಲೆನೋವಿನ ಬಾಧೆ ಹೆಚ್ಚಾಗುತ್ತದೆ. ಎಳೆನೀರು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. – ರಾಮಕೃಷ್ಣ, ಸ್ಥಳೀಯ

ನರೇಗಾ ಯೋಜನೆಯಲ್ಲಿ ಉದ್ಯೋಗ ಚೀಟಿ ಹೊಂದಿದವರಿಗೆ ತೆಂಗಿನ ತೋಟ ಮಾಡುವವರಿಗೆ ಪ್ರೋತ್ಸಾಹವನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತಿದೆ. ಪ್ರತಿ ಬೇಸಿಗೆಯಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಎಳೆನೀರು ತೋಟ ಮಾಡುವ ರೈತರು ನರೇಗಾ ಯೋಜನೆ ಬಳಸಿಕೊಳ್ಳಬೇಕು. -ಗುಣವಂತ, ಉಪನಿರ್ದೇಶಕ, ಜಿಲ್ಲಾ ತೋಟಗಾರಿಕಾ ಇಲಾಖೆ

 -ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next