Advertisement

Session: ಅನುದಾನ ಜಟಾಪಟಿ- ಸದನ ಪಾವಿತ್ರ್ಯ ಹಾಳು ಮಾಡಿದ ಮುಖ್ಯಮಂತ್ರಿ ಕ್ಷಮೆಗೆ ಆಗ್ರಹ

12:43 AM Dec 07, 2023 | Team Udayavani |

ಬೆಳಗಾವಿ: ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಗಿದೆ. ಸರಕಾರದ ಉತ್ತರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

Advertisement

ಬುಧವಾರ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ವಿಷಯ ಪ್ರಸ್ತಾವಿಸಿದ ಬಿಜೆಪಿಯ ವಿ. ಸುನಿಲ್‌ಕುಮಾರ್‌, ಅಧಿವೇಶನ ನಡೆಯುತ್ತಿರು ವಾಗ ಸಚಿವರು ಯಾವುದೇ ಹೊಸ ಯೋಜನೆ ಘೋಷಿಸುವಂತಿಲ್ಲ. ಹೀಗಿದ್ದರೂ ಮುಖ್ಯಮಂತ್ರಿಗಳು 10 ಸಾವಿರ ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಯಾವುದೇ ಸಮುದಾಯಕ್ಕೆ ಅನುದಾನ ಕೊಡಲು ಇವರ ಅನುಮತಿ ಪಡೆಯಬೇಕೇ? ಇಲ್ಲಿಗೆ ಅಧಿಕೃತವಾಗಿ ವಿಚಾರ ತಂದಾಗ ವಿರೋಧಿಸುತ್ತೀರೋ? ಬಿಡುತ್ತೀರೋ ತೀರ್ಮಾನಿಸಿ. ಸಿಎಂ ಹೇಳಿಕೆಯಲ್ಲಿ ಸಮಸ್ಯೆ ಏನಿದೆ ಎಂದು ಮರು ಪ್ರಶ್ನಿಸಿದರು.

ರೈತರಿಗೆ ಕೊಡಲು ಹಣ ಇಲ್ಲ
ಇದರಿಂದ ಆಡಳಿತ-ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬರಗಾಲದಲ್ಲಿ ರೈತರಿಗೆ ಕೊಡಲು ನಿಮ್ಮ ಸರಕಾರದಲ್ಲಿ ಹಣ ಇಲ್ಲ. ಆದರೆ ಸಮುದಾಯಗಳಿಗೆ ಹಣ ಕೊಡಲು ಇದೆಯೇ ಎಂದು ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡಾಗ, ಹಿಂದೆ ನೀವೂ ಇದನ್ನೇ ಮಾಡಿದ್ದು ಎಂದು ಆಡಳಿತಾರೂಢ ಶಾಸಕರು ತಿರುಗೇಟು ನೀಡಿದರು.

ಬಳಿಕ ಉತ್ತರಿಸಲು ಎದ್ದುನಿಂತ ಸಚಿವ ಎಚ್‌.ಕೆ. ಪಾಟೀಲ್‌, “ಸಿಎಂ ಇದ್ದ ಸಭೆಯಲ್ಲಿ ನಾನೂ ಇದ್ದೆ. ಮಾಹಿತಿ ಕೊರತೆಯಿಂದ ಆರೋಪಿಸ ಬೇಡಿ. ಈ ಬಜೆಟ್‌ನಲ್ಲಿ ಇರುವ ಅನುದಾನವನ್ನು ಎರಡು ಪಟ್ಟು ಹೆಚ್ಚಿಸುತ್ತೇವೆ. ನಿಮ್ಮ ಸಮುದಾಯಕ್ಕೆ 10 ಸಾವಿರ ಕೋಟಿ ರೂ.ವರೆಗೂ ಅನುದಾನದ ಪ್ರಮಾಣವನ್ನು ತಲುಪಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ. ಈ ವರ್ಷವೇ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿಲ್ಲ. ಇದರಲ್ಲಿ ಹಕ್ಕುಚ್ಯುತಿ ಆಗುವಂಥದ್ದು ಏನಿದೆ’ ಎಂದು ಪ್ರಶ್ನಿಸಿದರು.

ಸಿಎಂ ಮಾತಿಗೆ ಅಡ್ಡಿಪಡಿಸಲೂ ಗೊತ್ತಿದೆ: ಅಶೋಕ್‌
ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, “ನಾವು ಕೂಡ ಮಂತ್ರಿಗಳಾಗಿದ್ದವರು. ಸದನ ನಡೆಯುತ್ತಿರುವಾಗ ಇಂಥ ಘೋಷಣೆ ಮಾಡುತ್ತಿರಲಿಲ್ಲ. ಸಿಎಂನ ವೀಡಿಯೋವನ್ನು ನಾನು ಸ್ಪಷ್ಟವಾಗಿ ಗಮನಿಸಿ ದ್ದೇನೆ. ಮುಂದಿನ ವರ್ಷಗಳಲ್ಲಿ ಅನುದಾನ ಕೊಡುವುದಾಗಿ ಹೇಳಿದ್ದಲ್ಲ. 10 ಸಾವಿರ ಕೋಟಿ ರೂ.ಗಳನ್ನು ಕೊಡುತ್ತೇನೆ ಎಂದೇ ಹೇಳಿದ್ದಾರೆ’ ಎಂದು ಹೇಳಿದರು. ತನ್ನ ಮಾತಿಗೆ ವಿಪಕ್ಷಗಳು ಅಡ್ಡಿಪಡಿಸಿದಾಗ, ನಿಮ್ಮ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಅಡ್ಡಿ ಮಾಡಲು ನಮಗೂ ಗೊತ್ತಿದೆ ಎಂದು ಅಶೋಕ್‌ ಆಕ್ರೋಶದಿಂದ ಹೇಳಿದರು.

Advertisement

ಹೇಳಿಕೆ ಸರಿಯಾಗಿ ಪ್ರಕಟಿಸಿಲ್ಲ: ಸಿಎಂ ಗರಂ
ಮುಸ್ಲಿಮರಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ನನ್ನ ಹೇಳಿಕೆ ಯನ್ನು ಮಾಧ್ಯಮಗಳು ಸರಿಯಾಗಿ ಪ್ರಕಟಿಸದ ಕಾರಣ ಅದು ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಸಹಿತ ಎಲ್ಲ ಸಮುದಾಯದವರಿಗೆ ಅನುದಾನ ನೀಡುತ್ತೇನೆ ಎಂದಿದ್ದೆನಷ್ಟೆ ಎಂದು ಸಿಎಂ ಹೇಳಿದ್ದಾರೆ.

ಎನ್‌ಐಎ ತನಿಖೆ ಕೋರಿ ಅಮಿತ್‌ ಶಾಗೆ ಯತ್ನಾಳ್‌ ಪತ್ರ
ಭಯೋತ್ಪಾದಕ ಸಂಘಟನೆ ಐಎಸ್‌ ಬಗ್ಗೆ ಸಹಾನು ಭೂತಿ ಹೊಂದಿರುವ ಮುಸ್ಲಿಂ ನಾಯಕ ತನ್ವೀರ್‌ ಪೀರಾ ಜತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವುದು
ರಾಷ್ಟ್ರೀಯ ಆತಂಕದ ವಿಷಯ. ಈ ಬಗ್ಗೆ ಎನ್‌ಐಎಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಆರ್‌. ಪಾಟೀಲ್‌ ಯತ್ನಾಳ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮುದಾಯದ ಸಭೆ ಸಹಿತ ಹಲವು ಸಭೆ, ಸಮಾರಂಭಗಳಲ್ಲಿ ತನ್ವೀರ್‌ ಪೀರಾ ಜತೆಗೆ ಸಿಎಂ ವೇದಿಕೆ ಹಂಚಿಕೊಂಡಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಜತೆ ಪೀರಾ ಇರುವ ಹಾಗೂ ಪೀರಾ ಮೂಲಭೂತವಾದಿ ನಾಯಕರನ್ನು ಭೇಟಿಯಾಗಿರುವ ಪೋಟೋಗಳನ್ನು ಯತ್ನಾಳ್‌ “ಎಕ್ಸ್‌” ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಧ್ಯ ಪ್ರಾಚ್ಯ ದೇಶಗಳಲ್ಲಿ ತನ್ವೀರ್‌ ಪೀರಾ ಮೂಲಭೂತವಾದಿ ಇಸ್ಲಾಮಿಕ್‌ ಸಂಘಟನೆಗಳ ನಾಯಕರನ್ನು ಭೇಟಿಯಾಗಿರುವ ಮಾಹಿತಿ ನನಗೆ ಸಿಕ್ಕಿದೆ. ನಮ್ಮ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮುಸ್ಲಿಂ ದೇಶಗಳಿಂದ ಪೀರಾ ನಿಧಿ ತರುತ್ತಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನನಗೆ ಸಿಕ್ಕಿದೆ ಎಂದು ಪತ್ರದಲ್ಲಿ ಯತ್ನಾಳ್‌ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next