ಮೈಸೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಳವಡಿಸಿರುವ ಸಿಬಿಸಿಎಸ್ ಸ್ಕೀಂನಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧ ಕ್ರಾಫರ್ಡ್ ಹಾಲ್ ಎದುರು ಪ್ರತಿಭಟನೆ ನಡೆಸಿದರು.
ಯಾವುದೇ ಪೂರ್ವ ತಯಾರಿ ಇಲ್ಲದೆ ಪ್ರಸ್ತಕ ಸಾಲಿನಲ್ಲಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಿಬಿಸಿಎಸ್ ಸ್ಕೀಂ ಅನ್ನು ಏಕಾಏಕಿ ಅಳವಡಿಸಿರುವುದರಿಂದ ಅನೇಕ ಗೊಂದಲಗಳಿಗೆ ಎಡೆಮಾಡಿದೆ. ಅನೇಕ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರುಗಳಿಗೇ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೂ ಮಾಹಿತಿ ಸಿಗದೆ ಆತಂಕಕ್ಕೆ ಒಳಗಾಗುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮರು ಮೌಲ್ಯಮಾಪನ ಶುಲ್ಕವನ್ನು 1100 ರೂ. ನಿಗದಿಪಡಿಸಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಉತ್ತರ ಪತ್ರಿಕೆಯ ನಕಲು ಪ್ರತಿಗೂ 600 ರೂ.ಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾನಿಲಯ ಹಣ ಮಾಡಲು ಹೊರಟಿದೆಯೇ ಎಂದು ಪ್ರಶ್ನಿಸಿದರು.
ಅಲ್ಲದೇ, ಈ ಸ್ಕೀಂನಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಯಾವ ಆಧಾರದ ಮೇಲೆ ಗ್ರೇಡ್ ಅಥವಾ ಮೆರಿಟ್‌ಗಳಿಗೆ ಮಾರ್ಪಾಡು ಮಾಡಲಾಗಿದೆ ಎಂದು ಯಾವ ವಿದ್ಯಾರ್ಥಿಗಳಿಗೂ ತಿಳಿಯದಿರುವುದು ಆತಂಕಕ್ಕೀಡುಮಾಡಿದೆ. ಫಲಿತಾಂಶದ ವಿಷಯದಲ್ಲೂ ಹಲವಾರು ಗೊಂದಲಗಳುಂಟಾಗಿದೆ. ಕೆಲ ವಿದ್ಯಾರ್ಥಿಗಳ ಫಲಿತಾಂಶವೇ ಬಂದಿರುವುದಿಲ್ಲ. 482 ಅಂಕ ಪಡೆದಿರುವ ವಿದ್ಯಾರ್ಥಿಗೆ ಶೇ.75.54 ಇದ್ದರೆ, 481 ಅಂಕ ಪಡೆದ ವಿದ್ಯಾರ್ಥಿಗೆ ಶೇ.75.98 ಬಂದಿದೆ.
ಪ್ರತಿಷ್ಠಿತ ಮೈಸೂರು ವಿವಿಯಲ್ಲೇ ಈ ರೀತಿಯ ಸಮಸ್ಯೆಗಳುಂಟಾದರೆ ಇನ್ನು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡಲಾಗುತ್ತದೆ. ಆದ್ದರಿಂದ ಕೂಡಲೇ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮಕೈಗೊಮಡು ಪರಿಹರಿಸುವಂತೆ ಒತ್ತಾಯಿಸಿದರು.
ಮರು ಮೌಲ್ಯಮಾಪನ ಶುಲ್ಕ ಕಡಿಮೆ ಮಾಡಬೇಕು, ಫಲಿತಾಂಶದಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳನ್ನು ನಿವಾರಿಸಬೇಕು. ಎಲ್ಲಾ ಕಾಲೇಜುಗಳ ಪ್ರಾಂಶುಪಾಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸಿಬಿಸಿಎಸ್ ಸ್ಕೀಂನ ಸಂಪೂರ್ಣ ಮಾಹಿತಿ ನೀಡಬೇಕು. ಮೌಲ್ಯ ಮಾಪನ ಬಗ್ಗೆ ಗಮನಹರಿಸಿ ನ್ಯಾಯಯುತ ಫಲಿತಾಂಶ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿ ಮುಖಂಡರಾದ ಶರತ್,ರಾಕೇಶ್, ಚಿರಂತ್ ಶಿಂಧೆ, ರತ್ನ, ಶಾಂತಕುಮಾರ್, ನವೀನ್ ಸೇರಿದಂತೆ ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.