ಚಿಕ್ಕೋಡಿ: ಬರಗಾಲ ಇರುವ ಪ್ರದೇಶದಲ್ಲಿ ತಾಲೂಕಾಡಳಿತ ಪೂರೈಕೆ ಮಾಡುತ್ತಿರುವ ನೀರು ಮತ್ತು ಮೇವು ಸಮರ್ಪಕವಾಗಿ ಜನರಿಗೆ ಲಭ್ಯವಾಗುತ್ತಿಲ್ಲ ಎಂದು ತಾಪಂ ಸದಸ್ಯರು ದೂರಿದರು.
ಇಲ್ಲಿನ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಮಂಗಳವಾರ ತಾಪಂ ಅಧ್ಯಕ್ಷ ಉರ್ಮಿಳಾ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬರಗಾಲ ಇರುವ ಗ್ರಾಮಗಳಲ್ಲಿ ನೀರು ಮತ್ತು ಮೇವು ಪೂರೈಕೆೆ ಮಾಡುತ್ತಿದೆಯೆಂದು ತಾಲೂಕಾಡಳಿತ ಅಧಿಕಾರಿಗಳು ಕೇವಲ ದಾಖಲೆಗಳಲ್ಲಿ ಮಾತ್ರ ತೋರಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಮಡ್ಡಿ ಪ್ರದೇಶದ ಜನರಿಗೆ ಸಮರ್ಪಕ ಮೇವು ಲಭ್ಯವಾಗುತ್ತಿಲ್ಲ ಎಂದು ವಡ್ರಾಳ ಮತ್ತು ಬಂಬಲವಾಡ ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಡಾ| ಸಂತೋಷ ಬಿರಾದಾರ ಮಾತನಾಡಿ, ಚಿಕ್ಕೋಡಿ ತಾಲೂಕಿನ ಬರಪೀಡಿತ ಬಹುತೇಕ ಗ್ರಾಮಗಳಿಗೆ ಬೇಡಿಕೆ ಅನುಗುಣವಾಗಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಬೆಳಕೂಡ ಕ್ರಾಸ್ ಹತ್ತಿರ ಒಂದು ಮೇವು ಬ್ಯಾಂಕ ಸ್ಥಾಪನೆ ಮಾಡಿ ಅನುಕೂಲ ಕಲ್ಪಿಸಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಡ್ರಾಳ ತಾಪಂ ಸದಸ್ಯ ರಾಜು ಪಾಟೀಲ, ಬೆಳಕೂಡ ಕ್ರಾಸ್‌ನಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಿದರೆ ಜೈನಾಪುರ, ವಡ್ರಾಳ, ಮುಗಳಿ, ಹತ್ತರವಾಟ ಮತ್ತು ಕರೋಶಿ ಗ್ರಾಮದ ಜನರಿಗೆ ಮೇವು ತರುವುದು ಅಸಾಧ್ಯ. ಬೆಳಕೂಡ ಕ್ರಾಸ್‌ದಿಂದ ಜೈನಾಪುರ ಸುಮಾರು 10 ಕಿ.ಮೀ. ದೂರವಾಗುತ್ತದೆ. ರೈತರಿಗೆ ಅನುಕೂಲವಾಗುವ ಹಾಗೆ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು. ಜೈನಾಪುರ ಮತ್ತು ಮುಗಳಿ ಗ್ರಾಮದ ಎಷ್ಟು ಜನ ರೈತರು ಮೇವು ಪಡೆದುಕೊಂಡು ಹೋಗಿದ್ದಾರೆಂದು ದಾಖಲೆ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಬಂಬಲವಾಡ ತಾಪಂ ಸದಸ್ಯ ಕಾಶಿನಾಥ ಕುರಣಿ ಮಾತನಾಡಿ, ಮಾರ್ಚ್ ತಿಂಗಳಿಂದ ತಾಲೂಕಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಟ್ಯಾಂಕರ ಆರಂಭವಾದಾಗಿನಿಂದ ಇಲ್ಲಿಯವರಿಗೆ ಜಿಪಿಎಸ್ ಅಳವಡಿಸದ ಮಾಲಿಕರು ಈಗ ಏಕೆ ಜಿಪಿಎಸ್ ಅಳವಡಿಸಿದ್ದಾರೆ. ಜಿಪಿಎಸ್ ಅಳವಡಿಸದೇ ನೀರು ಪೂರೈಕೆ ಮಾಡಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಸಂಶಯ ಮೂಡಿದೆ. ಇದು ತನಿಖೆ ಆಗಬೇಕು ಎಂದರು ಒತ್ತಾಯಿಸಿದರು.
ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಜನರಿಗೆ ತಕ್ಷಣ ನೀರು ಕೊಡಬೇಕು. ಆ ದಿಸೆಯಲ್ಲಿ ಟೆಂಡರ್ ಕರೆದು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದೆ. ಕೂಡಲೇ ಜಿಪಿಎಸ್ ಅಳವಡಿಸಿಕೊಳ್ಳಬೇಕೆಂದು ಸೂಚನೆ ನೀಡಿದರೂ ಸ್ವಲ್ಪ ವಿಳಂಬವಾಗಿದೆ. ಸರ್ಕಾರದ ಹಣ ದುರುಪಯೋಗವಾಗಲು ಬಿಡುವುದಿಲ್ಲ, ಆಯಾ ಗ್ರಾಪಂ ಪಿಡಿಒ, ತಾಪಂ ಇಒ ಮತ್ತು ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕಾರ್ಯಕಾರಿ ಅಭಿಯಂತರ ಸಹಿ ಮಾಡಿದಾಗ ಮಾತ್ರ ನಾನು ಹಣ ಬಿಡುಗಡೆ ಮಾಡುತ್ತೇನೆಂದು ತಹಶೀಲ್ದಾರ್ ಬಿರಾದಾರ ಸ್ಪಷ್ಟಪಡಿಸಿದರು.
ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಬೇಕು. ಹಾಳಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಜನರಿಗೆ ನೀರು ಕೊಡಬೇಕೆಂದು ತಾಪಂ ಸದಸ್ಯ ರವೀಂದ್ರ ಮಿರ್ಜೆ ಒತ್ತಾಯಕ್ಕೆ ತಾಲೂಕಿನಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸರ್ವೇ ಮಾಡಿ ಅವುಗಳನ್ನು ದುರಸ್ತಿಗೊಳಿಸಲು ಸರ್ಕಾರ ಅನುದಾನ ನೀಡಿದ್ದು, ಶೀಘ್ರ ದುರಸ್ತಿ ಮಾಡಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕಾರ್ಯನಿರ್ವಾಹಕ ಅಭಿಯಂತ ಎಸ್.ಬಿ. ಬಣಕಾರ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಉರ್ಮಿಳಾ ಪಾಟೀಲ ಮಾತನಾಡಿ, ತಾಲೂಕಾ ಪಂಚಾಯತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು. ತಾಪಂ ಸಭೆಯಲ್ಲಿ ಚರ್ಚೆ ಮಾಡಿರುವ ವಿಷಯಗಳನ್ನು ಶೀಘ್ರ ಇತ್ಯರ್ಥಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷರಾದ ಮಹಾದೇವಿ ನಾಯಿಕ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ವಿರೇಂದ್ರ ಪಾಟೀಲ, ಅಚ್ಚುತ್ ಮಾನೆ, ಪ್ರಕಾಶ ರಾಚನ್ನವರ,ಪಾಂಡುರಂಗ ಕೋಳಿ, ಸುರೇಶ ನಸಲಾಪುರೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.