Advertisement

ಬಿಎಸ್‌ವೈ ವಿರುದ್ಧ ಕ್ರಮಕ್ಕೆ ಆಗ್ರಹ

10:07 AM Feb 10, 2019 | |

ಶಿವಮೊಗ್ಗ: ಸಂವಿಧಾನ ವಿರೋಧಿ ನೀತಿ ಮೂಲಕ ಅಧಿಕಾರ ಹಿಡಿಯಲೆತ್ನಿಸುತ್ತಿರುವ ಬಿ.ಎಸ್‌. ಯಡಿಯೂರಪ್ಪನವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಶನಿವಾರ ಮಹಾವೀರ ಸರ್ಕಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರತಿಭಟನೆ ನಡೆಸಿತು.

Advertisement

ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲಾಗದೆ, ಸರ್ಕಾರ ರಚಿಸಲು ಅವಕಾಶ ನೀಡಿದರೂ ಬಹುಮತ ಯಾಚನೆ ಮಾಡದೇ ವಿಧಾನಸೌಧದಿಂದ ಹೊರನಡೆದ ಬಿ.ಎಸ್‌. ಯಡಿಯೂರಪ್ಪ ಹತಾಶರಾಗಿದ್ದಾರೆ. ಹಾಗಾಗಿ ಸ್ಥಿರವಾಗಿರುವ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಪದೇ ಪದೇ ಉರುಳಿಸುವ ಪ್ರಯತ್ನ ಮಾಡುತ್ತಾ ಜನರ ದಿಕ್ಕು ತಪ್ಪಿಸುತ್ತಿರುವುದನ್ನು ಕಾಂಗ್ರೆಸ್‌ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಬಿ.ಎಸ್‌. ಯಡಿಯೂರಪ್ಪನವರಿಗೆ ಅಧಿಕಾರವೇ ಮುಖ್ಯವಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದರೂ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದೊಂದಿಗೆ ಸಹಕಾರ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸದೇ ಸರ್ಕಾರವನ್ನು ಟೀಕಿಸುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು 8 ತಿಂಗಳಾಗಿದ್ದು, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌- ಜೆಡಿಎಸ್‌ನ ಮುಖಂಡರಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೂ ಕಾಂಗ್ರೆಸ್‌ನ ಶಾಸಕರು ನಮ್ಮೊಂದಿಗಿದ್ದಾರೆ. ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದು ಕೊಳ್ಳುತ್ತಾರೆ ಎಂದು ಊಹಾಪೋಹಗಳನ್ನು ಹರಿಬಿಡುತ್ತಿದ್ದಾರೆ. ಅಲ್ಲದೇ ಶಾಸಕರನ್ನು ಕೂಡಿಹಾಕಿಟ್ಟುಕೊಳ್ಳುವ, ಅವರಿಗೆ ಹಣದ ಆಮಿಷಗಳನ್ನು ಒಡ್ಡುವ, ಪಕ್ಷವನ್ನು ತೊರೆಯುವಂತೆ ಪ್ರಚೋದಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಜೆಡಿಎಸ್‌ನ ಶಾಸಕ ನಾಗನ ಗೌಡ ಅವರ ಪುತ್ರ ಶರಣಗೌಡ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಆಮಿಷವೊಡ್ಡಿರುವುದು ಇದೀಗ ಜಗಜ್ಜಾಹೀರಾಗಿದೆ. ಮೋದಿ ಹಾಗೂ ಅಮಿತ್‌ ಶಾಗೆ ಹೇಳಿ ಈಗಾಗಲೇ ಎಲ್ಲಾ ವ್ಯವಸ್ಥೆ ಆಗಿದೆ. ಹೀಗಾಗಿ ನಿನಗೆ ಸಚಿವ ಖಾತೆ ಕೊಡ್ತೀವಿ ಎಷ್ಟು ಬೇಕಾದ್ರೂ ದುಡ್ಡು ಮಾಡ್ಕೋ ಎಂದು ಹೇಳುವ ಮೂಲಕ ಸಾಂವಿಧಾನಿಕ ಹುದ್ದೆಯಲ್ಲಿರುವ ಸ್ಪೀಕರ್‌ ಅವರ ಹೆಸರಿಗೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

Advertisement

ಸಂವಿಧಾನ ವಿರೋಧಿ ನೀತಿಗಳ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ಮೇಲೆ ಕೂಡಲೇ ರಾಜ್ಯಪಾಲರು ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಶ್ವನಾಥ್‌ (ಕಾಶಿ), ನಾಗರಾಜ್‌, ವಿ.ಎ. ರಮೇಶ್‌ ಹೆಗ್ಡೆ, ಸಿ.ಜಿ. ಮಧುಸೂದನ್‌, ಚೇತನ್‌ ಕೆ., ಬಾಲಾಜಿ ಎಚ್.ಎಸ್‌., ಎಸ್‌.ಪಿ. ದಿನೇಶ್‌, ಚಂದ್ರಶೇಖರ್‌, ಭೂಪಾಲ್‌, ವಿಜಯಲಕ್ಷ್ಮಿ ಸಿ.ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next