ಜಗಳೂರು : ಶೇಂಗಾ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕು ಮತ್ತು ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ( ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ವತಿಯಿಂದ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ತಾಲೂಕು ಕಚೇರಿಗೆ ಆಗಮಿಸಿ ಉಪ ತಹಶೀಲ್ದಾರ್‌ಗೆ ತಮ್ಮ ಬೇಡಿಕೆಗಳ ಮನವಿ ನೀಡಿದರು. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ,
ಕೆಲವು ವರ್ಷಗಳಿಂದ ಡೀಸೆಲ್, ಬಿತ್ತನೆ ಬೀಜ, ಗೊಬ್ಬರ,, ವಿದ್ಯುತ್‌ತ್ಛಕ್ತಿ, ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು, ಇವುಗಳಿಗೆ ಮಾತ್ರ ಸರಕಾರವು ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುತ್ತದೆ. ಆದರೆ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುತ್ತಿಲ್ಲ. ಕೇಂದ್ರ ಸರಕಾರವು ಮೋಸದ ಬೆಂಬಲಬೆಲೆಯನ್ನು ಘೋಷಣೆ ಮಾಡಿದ್ದು, ಕ್ವಿಂಟಲ್ ಶೇಂಗಾಕ್ಕೆ 5090ರೂ. ನಿಗದಿ ಮಾಡಿದ್ದಾರೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. 1 ಎಕರೆಯಲ್ಲಿ ಶೇಂಗಾ ಬೆಳೆಯುವುದಕ್ಕೆ ಮಾಡುವ ಖರ್ಚಿಗೂ ಮತ್ತು ಬರುವ ಆದಾಯಕ್ಕೂ ಲೆಕ್ಕ ಹಾಕಿದರೆ ಪ್ರತಿ ಎಕರೆಗೆ 4 ಸಾವಿರ ರೂ. ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಸುಮಾರು 34 ಲಕ್ಷದ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುತ್ತಾರೆ. ಕೇಂದ್ರ ಸರ್ಕಾರ ನಿಗ ದಿ ಮಾಡಿರುವ ಬೆಂಬಲ ಬೆಲೆ 5090 ರೂ.ಗೆ ರಾಜ್ಯ 2500 ರೂ. ಮತ್ತು ಕೇಂದ್ರ 2500 ರೂ. ಬೋನಸ್ ನೀಡಿ ಒಟ್ಟು ರೂ.10,000 ಬೆಲೆಯನ್ನು ನಿಗದಿಗೊಳಿಸಬೇಕು. ಖರೀದಿ ಕೇಂದ್ರದ ಮುಖಾಂತರ ಶೇಂಗಾ ಖರೀದಿ ಮಾಡಿ ರೈತರ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ತತ್‌ಕ್ಷಣ ಎ.ಪಿ.ಎಂ.ಸಿ. ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ, ಕೇಂದ್ರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಬೆಳೆ ಖರೀದಿಸುವ ಖರೀದಿದಾರರು ಹಾಗೂ ದಲ್ಲಾಳಿಗಳ ಲೈಸನ್ಸ್ ರದ್ದುಗೊಳಿಸುವ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸುವ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಸಂಘಟನೆಯ ದಿಬ್ಬದಹಳ್ಳಿ ಗಂಗಾಧರಪ್ಪ, ಪದಾಧಿಕಾರಿಗಳಾದ ಚಿಕ್ಕಮಲ್ಲನಹೊಳೆ ಚಿರಂಜೀವಿ, ಗೌಡಗೊಂಡನಹಳ್ಳಿ ಸತೀಶ್, ದೊಣೆಹಳ್ಳಿ ಲೋಕೇಶ್, ಯರಲಕಟ್ಟೆ ಕೆಂಚಪ್ಪ, ಚಿಕ್ಕಮಲ್ಲನಹೊಳೆ ಶರಣಪ್ಪ, ಪ್ರಹ್ಲಾದಪ್ಪ, ಇತರರು ಇದ್ದರು.