Advertisement

ಸೆಕ್ಕೋಡು-ಹಳ್ಳಿಹೊಳೆ: ಸಂಪರ್ಕ ಸೇತುವೆಗೆ ಬೇಡಿಕೆ

06:00 AM Jul 12, 2018 | Team Udayavani |

ವಿಶೇಷ ವರದಿ- ಜಡ್ಕಲ್‌: ಸೆಕ್ಕೋಡಿನಿಂದ ಕೇವಲ 2 ಕಿ.ಮೀ. ಅಂತರವಿದ್ದರೂ, ಸುತ್ತು ಬಳಸಿ 10 ಕಿ.ಮೀ. ದೂರ ಸಂಚರಿಸಿಕೊಂಡು ಬರಬೇಕಾದ ಅನಿವಾರ್ಯತೆ ಸಿರಾ ಮಡಿಕೆ (ಕುಂಟನ ಮಡಿಕೆ) ಗ್ರಾಮಸ್ಥರದು. 

Advertisement

ಮೆಕ್ಕೆಹೊಳೆಗೆ ಬೈಂದೂರು ಕ್ಷೇತ್ರ ವ್ಯಾಪ್ತಿಯ ಸೆಕ್ಕೋಡಿನಿಂದ ಹಳ್ಳಿಹೊಳೆಗೆ ಅನೇಕ ವರ್ಷಗಳಿಂದ ಸಂಪರ್ಕ ಸೇತುವೆಗೆ ಬೇಡಿಕೆಯಿದ್ದರೂ, ಯಾವ ಜನಪ್ರತಿನಿಧಿಗಳು ಕೂಡ ಇತ್ತ ಗಮನವೇ ಕೊಟ್ಟಿಲ್ಲ. 

10 ಕಿ.ಮೀ. ಹೆಚ್ಚುವರಿ ಪ್ರಯಾಣ
ಸಿರಾ ಮಡಿಕೆ ಗ್ರಾಮಸ್ಥರಿಗೆ ಮೆಕ್ಕೆಹೊಳೆಗೆ ಸೇತುವೆಯಾಗದೇ ಇರುವುದರಿಂದ ಈಗ ಮುದೂರು ಮಾರ್ಗವಾಗಿ ಸೆಕ್ಕೋಡು, ಜಡ್ಕಲ್‌, ಕೊಲ್ಲೂರಿಗೆ ಸಂಚರಿಸಬೇಕಾಗಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಕೊಲ್ಲೂರು ಕಾಲೇಜಿಗೆ ಹೋಗುವವರು ಈ ಭಾಗದಲ್ಲಿ ಇರುವುದರಿಂದ ಇಲ್ಲಿ ಸೇತುವೆಯಾದರೆ ಬಹಳಷ್ಟು ಅನುಕೂಲವಾಗಲಿದೆ. 

ಮಳೆಗಾಲದಲ್ಲಿ ಸಂಪರ್ಕವೇ ಇಲ್ಲ
ಸೆಕ್ಕೋಡಿನಿಂದ ಸಿರಾ ಮಡಿಕೆ, ಹಳ್ಳಿಹೊಳ್ಳೆಗೆ ಈ ಮಾರ್ಗವಾಗಿ ಬೇಸಗೆಯಲ್ಲಾದರೂ ಈ ಮೆಕ್ಕೆ ಹೊಳೆಯಲ್ಲಿ ನೀರಿನ ಮಟ್ಟ ಕಡಿಮೆಯಿರುತ್ತದೆ, ಹೇಗೋ ದೊಡ್ಡ ವಾಹನದಲ್ಲಿ ಸಂಚರಿಸಬಹುದು. ಆದರೆ ಮಳೆಗಾಲದಲ್ಲಿ ನೀರಿನ ಮಟ್ಟವು ಹೆಚ್ಚಿದ್ದು, ಸಂಪರ್ಕವೇ ಸಾಧ್ಯವಿಲ್ಲದಂತಾಗುತ್ತದೆ. 

ಹಳ್ಳಿಹೊಳೆಗೆ ಹತ್ತಿರ
ಮೆಕ್ಕೆ ಹೊಳೆಗೆ ಸೇತುವೆಯಾದರೆ ಹಳ್ಳಿಹೊಳೆಗೂ ತುಂಬಾ ಸೆಕ್ಕೋಡಿಗೂ ತುಂಬಾ ಹತ್ತಿರದ ಮಾರ್ಗವಾಗಲಿದೆ. ಸೆಕ್ಕೋಡಿನಿಂದ ಹಳ್ಳಿಹೊಳೆ, ಕಮಲಶಿಲೆ, ಮುದೂರು, ಸಿದ್ದಾಪುರಕ್ಕೆ ಹತ್ತಿರವಾಗಲಿದೆ. ಈ ಭಾಗದಲ್ಲಿ ಸುಮಾರು 150 ರಿಂದ 160 ಮನೆಗಳಿದ್ದು, ಅವರಿಗೆ ತುಂಬಾನೇ ಅನುಕೂಲವಾಗಲಿದೆ. ಅದರಲ್ಲೂ ಈ ಹೊಳೆಯ ಆಚೆ ದಡದ ತಟದ ಸಮೀಪವೇ ಅಂದರೆ ಸಿರಾ ಮಡಿಕೆ (ಕುಂಟನ ಮಡಿಕೆ) ಭಾಗದಲ್ಲಿ 6 ಮನೆಗಳಿದ್ದು, ಅವರು ಇಲ್ಲಿ ಸೇತುವೆಯಿಲ್ಲದೆ ಸುತ್ತು ಬಳಸಿ ಬರಬೇಕಾಗಿದೆ. 

Advertisement

ಸೇತುವೆ ಬೇಕೆಂದವರೇ ಬಲಿ
ಕುಂಟನ ಮಡಿಕೆ ಭಾಗದಲ್ಲಿ 10 -1 5 ವರ್ಷಗಳಿಂದ ಸೇತುವೆ ಬೇಕು ಎಂದು ಪ್ರಬಲವಾಗಿ ಹೋರಾಟ ನಡೆಸುತ್ತಿದ್ದ ಶೀನ ಪೂಜಾರಿ ಅವರು ಮಳೆಗಾಲದಲ್ಲಿ ಇದೇ ಹೊಳೆ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವುದು ದುರಂತ. 

ಸೇತುವೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು
ಕಳೆದ ಚುನಾವಣೆ ಸಮಯದಲ್ಲಿ ಸೆಕ್ಕೋಡಿನಿಂದ ಹಳ್ಳಿಹೊಳೆಗೆ ಸಂಪರ್ಕ ಕಲ್ಪಿಸುವ ಮೆಕ್ಕಿ ಹೊಳೆಗೆ ಸೇತುವೆಗೆ ಅಲ್ಲಿನ ಜನ ಬೇಡಿಕೆಯಿಟ್ಟಿದ್ದು, ನನ್ನ ಅವಧಿಯಲ್ಲಿ ಸೇತುವೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಬೈಂದೂರು ಕ್ಷೇತ್ರದಲ್ಲಿ ಎಲ್ಲೆಲ್ಲ ಸೇತುವೆಗೆ ಬೇಡಿಕೆಯಿದೆಯೋ ಅಲ್ಲೆಲ್ಲ ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. 
–  ಬಿ.ಎಂ. ಸುಕುಮಾರ ಶೆಟ್ಟಿ, 
ಬೈಂದೂರು ಶಾಸಕರು

ಸೇತುವೆ ನಿರ್ಮಾಣ ಅಗತ್ಯ
ನಮಗೆ ಸೆಕ್ಕೋಡಿನಿಂದ ನಮ್ಮ ಮನೆಗೆ ಹೋಗಬೇಕಾದರೆ ಈಗ 6 ಕಿ.ಮೀ. ಸುತ್ತು ಬಳಸಿ ಬರಬೇಕಾಗಿದೆ. ಅದೇ ಈ ಹೊಳೆಗೆ ಸಿರಾ ಮಡಿಕೆ ಪ್ರದೇಶದಲ್ಲಿ ಸೇತುವೆಯೊಂದು ಆದರೆ ಕೇವಲ 2 ಕಿ.ಮೀ. ಮಾತ್ರ ದೂರವಿರುತ್ತದೆ. ಈ ಬಾರಿಯಂತೂ ಆಗಿಲ್ಲ. ಮುಂದಿನ ಮಳೆಗಾಲಕ್ಕೆ ಮುಂಚಿತವಾಗಿಯಾದರೂ ಸೇತುವೆಯೊಂದು ನಿರ್ಮಿಸಿ ಕೊಡಲಿ. 
– ಬಸವ ಪೂಜಾರಿ, 
ಸ್ಥಳೀಯರ

Advertisement

Udayavani is now on Telegram. Click here to join our channel and stay updated with the latest news.

Next