ಹಾವೇರಿ: ಹವಾಮಾನ ಇಲಾಖೆ ವರದಿಯಂತೆ ಮೂರ್‍ನಾಲ್ಕು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. ಜಿಲ್ಲೆಯಲ್ಲಿ ಮುಂಗಾರು ಕೃಷಿ ಯೋಜನೆಯಂತೆ ಡಿಎಪಿ ಗೊಬ್ಬರ ಸೇರಿದಂತೆ ಮುಂಗಾರು ಬಿತ್ತನೆಗೆ ಅಗತ್ಯವಾದ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮುಂಗಾರು ಬಿತ್ತನೆ ಕೃಷಿ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಮಾನ ಇಲಾಖೆ ಮಾಹಿತಿಯಂತೆ ಈ ವರ್ಷ ಮುಂಗಾರು ಮಳೆ ಶೇ.4 ಕಡಿಮೆಯಾಗಲಿದೆ ಎಂದು ಮುನ್ಸೂಚನೆ ದೊರೆತಿದೆ. ಆದಾಗ್ಯೂ ವಾಡಿಕೆ ಮಳೆಯಂತೆ ಜಿಲ್ಲೆಯಲ್ಲಿ ಮುಂಗಾರಿಗೆ ಅಗತ್ಯವಾದ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳು ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಕುರಿತಂತೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ 15 ರಿಂದ 18 ಸಾವಿರ ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಬೇಡಿಕೆ ಇದೆ. ಈಗಾಗಲೇ ಅಂದಾಜು 15 ಸಾವಿರ ಮೆಟ್ರಿಕ್ ಟನ್‌ನಷ್ಟು ಗೊಬ್ಬರ ದಾಸ್ತಾನು ಇದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿಗದಿ ಯಾದ ಗೊಬ್ಬರ ಹಂಚಿಕೆಯನ್ನು ತಿಂಗಳ ಮೊದಲ ವಾರದಲ್ಲಿ ಪೂರೈಕೆ ಮಾಡಲು ಈಗಾಗಲೇ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದರಿಂದ ಈ ವರ್ಷ ಡಿಎಪಿ ಗೊಬ್ಬರಕ್ಕೆ ಯಾವುದೇ ಕೊರತೆ ಎದುರಾಗುವುದಿಲ್ಲ ಎಂದರು.
ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ 2018ರಲ್ಲಿ 14,653, 2019ರಲ್ಲಿ 16,291, 2020ರಲ್ಲಿ 20,312 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ. ಪ್ರಸಕ್ತ ಮುಂಗಾರು ಸಾಲಿನಲ್ಲಿ 26,635 ಮೆಟ್ರಿಕ್ ಟನ್ ಹಂಚಿಕೆಯಾಗಿದೆ. ಈ ವರ್ಷ 6,323 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ. ಮೇ ಕೊನೆಯವರೆಗೆ 10,450 ಮೆಟ್ರಿಕ್ ಟನ್ ಡಿಎಪಿ ಜಿಲ್ಲೆಗೆ ಪೂರೈಕೆಯಾಗಿದ್ದು, 5,960 ಮೆಟ್ರಿಕ್ ಟನ್ ಹಳೇ ದಾಸ್ತಾನು ಸೇರಿದಂತೆ ಮೇ ತಿಂಗಳಲ್ಲಿ 9,200 ಮೆಟ್ರಿಕ್ ಟನ್ ಸೇರಿದಂತೆ 15,161 ಮೆಟ್ರಿಕ್ ಡಿಎಪಿ ಗೊಬ್ಬರ ಬಳಕೆಗೆ ಲಭ್ಯವಿದೆ. ಈಗಾಗಲೇ 5745 ಮೆಟ್ರಿಕ್ ಟನ್ ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗಿದೆ.
ಪ್ರಸ್ತುತ 9416 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಮಹಾ ಮಂಡಳ (ಕೆಎಸ್‌ಸಿಎಂಎಫ್)ದಲ್ಲಿ 2626 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಅಂದಾಜು 14,657 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಲಭ್ಯವಿದೆ. ಜೂನ್ ತಿಂಗಳಿಗೆ ಜಿಲ್ಲೆಗೆ ನಿಗ ದಿಯಾದ 5,242 ಮೆಟ್ರಿಕ್ ಟನ್ ಹಾಗೂ ಜುಲೈ ತಿಂಗಳಿಗೆ ನಿಗ ದಿಯಾದ ಕೋಟಾವನ್ನು ತಿಂಗಳ ಆರಂಭದಲ್ಲಿ ನೀಡಿದರೆ ನಮಗೆ ಜುಲೈವರೆಗೆ 18 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಲಭ್ಯವಾಗಲಿದೆ ಎಂದರು.
ಹಾವೇರಿ, ರಾಣಿಬೆನ್ನೂರು-ಹಿರೇಕೆರೂರು ತಾಲೂಕುಗಳಲ್ಲಿ ಹೆಚ್ಚು ಸಹಕಾರಿ ಸಂಘಗಳಿರುವ ಕಾರಣ ಈ ಸಂಘಗಳ ಮೂಲಕವೇ ಗೊಬ್ಬರ ಹೆಚ್ಚು ಪ್ರಮಾಣದಲ್ಲಿ ವಿತರಿಸಲಾಗುತ್ತದೆ. ಬ್ಯಾಡಗಿ, ಹಾನಗಲ್ಲ, ಶಿಗ್ಗಾವಿ, ಸವಣೂರು ತಾಲೂಕುಗಳಲ್ಲಿ ಸಹಕಾರ ಸಂಘಗಳು ಕಡಿಮೆ ಸಂಖ್ಯೆಯಲ್ಲಿವೆ. ಕೆಲ ಸಂಘಗಳ ನೋಂದಣಿ ನವೀಕರಣಗೊಂಡಿಲ್ಲ. ಕೆಲ ಸಂಘಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿ ಸಹಕಾರಿ ಸಂಘಗಳನ್ನು ಬಲಪಡಿಸಲು ಸಾಲದ ನೆರವು ದೊರಕಿಸಿ ಕೊಡುವುದು, ನೋಂದಣಿ ಸೇರಿದಂತೆ ಹಳೆ ಸಹಕಾರಿ ಸಂಘಗಳನ್ನು ಕ್ರಿಯಾಶೀಲಗೊಳಿಸಲು, ಹೊಸ ಸಂಘಗಳನ್ನು ಆರಂಭಿಸಲು ವಿಶೇಷ ಅಭಿಯಾನ ಮಾದರಿಯಲ್ಲಿ ಕ್ರಮ ವಹಿಸುವಂತೆ ಸಹಕಾರಿ ಸಂಘಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್ ಇದ್ದರು.