Advertisement

ಡೆಲ್ಟಾ ಪ್ಲಸ್‌ ಭೀತಿ: ಹೆಸರಿಗಷ್ಟೇ ಕಣ್ಗಾವಲು! ರೈಲು ನಿಲ್ದಾಣಗಳಲ್ಲಿ ತಪಾಸಣೆ ಇಲ್ಲ

02:54 AM Jul 04, 2021 | Team Udayavani |

ಮಂಗಳೂರು: ಕೊರೊನಾ ವೈರಸ್‌ನ ರೂಪಾಂತರಿತ ವೈರಸ್‌ ಡೆಲ್ಟಾ ಪ್ಲಸ್‌ ಹರಡುವಿಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಸರಕಾರ ತಿಳಿಸಿದ್ದರೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಗೆ ವ್ಯವಸ್ಥೆ ಮಾಡಿಲ್ಲ.
ನೆಗೆಟಿವ್‌ ಪ್ರಮಾಣಪತ್ರ ಅಥವಾ ಕನಿಷ್ಠ ಒಂದು ಡೋಸ್‌ ಕೊರೊನಾ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಂಡು ರೈಲ್ವೇಯವರು ಪ್ರಯಾಣಿಕರನ್ನು ರೈಲಿಗೆ ಹತ್ತಿಸಿಕೊಳ್ಳಬೇಕು ಎಂಬ ಆದೇಶವನ್ನು ಮಾತ್ರ ಹೊರಡಿಸಿ ಸರಕಾರ ಸುಮ್ಮನಾಗಿದೆ.

Advertisement

ಹಗಲು ಮಾತ್ರ ತಪಾಸಣೆ
ರಾಜ್ಯ ಸರಕಾರವು ಮಹಾರಾಷ್ಟ್ರ, ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಣ್ಗಾವಲು ಇರಿಸಿದೆ. ದ.ಕ. ಜಿಲ್ಲೆಯ ತಲಪಾಡಿಯಲ್ಲಿ ಕೇರಳ ಭಾಗದಿಂದ ವಾಹನಗಳಲ್ಲಿ ಬರುವವರ ತಪಾಸಣೆಗೆ ಬೆಳಗ್ಗೆ 9ರಿಂದ ಸಂಜೆ 6ರ ತನಕ ವ್ಯವಸ್ಥೆ ಇದೆ. ಬಳಿಕ ಮರುದಿನ ಬೆಳಗ್ಗೆ 9ರ ತನಕ ತಪಾಸಣೆ ಇರುವುದಿಲ್ಲ. ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಗೆ ವ್ಯವಸ್ಥೆಯನ್ನೇ ಮಾಡಿಲ್ಲ. ಅಂತೆಯೇ ಕೇರಳದಿಂದ ಬಸ್‌ಗಳಲ್ಲಿ ಬಂದು ಗಡಿಯಲ್ಲಿ ಇಳಿದು ಕರ್ನಾಟಕದ ಬಸ್ಸನ್ನೇರಿ ಪ್ರಯಾಣ ಮುಂದುವರಿಸುವವರನ್ನೂ ತಪಾಸಣೆ ಮಾಡುತ್ತಿಲ್ಲ ಎಂಬ ಆರೋಪ ಇದೆ. ಈ ಬಗ್ಗೆ ರೈಲು ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿ ದರೆ ಜಿಲ್ಲಾಡಳಿತದತ್ತ ಜಿಲ್ಲಾಡಳಿತದ ಅಧಿಕಾರಿಗಳನ್ನು ಕೇಳಿದರೆ ರೈಲ್ವೇಯವರತ್ತ ಬೆರಳು ತೋರಿಸುತ್ತಿದ್ದಾರೆ.

ಮಂಗಳೂರಿಗೆ ರೈಲುಗಳು ನೆರೆಯ ಮಹಾ ರಾಷ್ಟ್ರ ಮತ್ತು ಕೇರಳದಿಂದ ಮಾತ್ರವಲ್ಲ ತಮಿಳು ನಾಡು, ಗೋವಾ, ಗುಜರಾತ್‌, ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ದಿಲ್ಲಿಗಳಿಂದ ಬರುತ್ತವೆ. ಆ ರಾಜ್ಯಗಳ ಪ್ರಯಾಣಿಕರೂ ಇಲ್ಲಿ ಇಳಿಯುತ್ತಾರೆ. ಆದರೆ ರಾಜ್ಯ ಸರಕಾರ ಮಹಾರಾಷ್ಟ್ರ ಮತ್ತು ಕೇರಳದ ಪ್ರಯಾಣಿಕರಿಗೆ ಮಾತ್ರ ನೆಗೆಟಿವ್‌ ಪ್ರಮಾಣಪತ್ರ ಅಥವಾ ಲಸಿಕೆಯ 1 ಡೋಸನ್ನಾದರೂ ಪಡೆದಿರ ಬೇಕೆಂಬ ನಿರ್ಬಂಧ ವಿಧಿಸಿದೆ. ಹಾಗಾದರೆ ಉಳಿದ ರಾಜ್ಯ ಗಳಲ್ಲಿ ಕೊರೊನಾ ಇಲ್ಲವೇ? ಎಂಬುದು ಸಾರ್ವಜನಿಕರ ಪ್ರಶ್ನೆ.

ನೆಗೆಟಿವ್‌ ಸರ್ಟಿಫಿಕೆಟ್‌ ಅಥವಾ ಕನಿಷ್ಠ 1 ಡೋಸ್‌
ಲಸಿಕೆ ಹಾಕಿಸಿರುವುದನ್ನು ಖಚಿತಪಡಿಸಿಕೊಂಡು ರೈಲ್ವೇಯವರು ಪ್ರಯಾಣಿಕರಿಗೆ ಅನುಮತಿ ನೀಡುವಂತೆ ಸರಕಾರದ ಆದೇಶವಿದೆ; ಆದೇಶದ ಪ್ರತಿ ಯನ್ನು ರೈಲ್ವೇಯವರಿಗೆ ನೀಡಿ ಅದರಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
– ಡಾ| ಕಿಶೋರ್‌ ಕುಮಾರ್‌, ಜಿಲ್ಲಾ ಆರೋಗ್ಯ ಅಧಿಕಾರಿ

ಕೊರೊನಾ ನೆಗೆಟಿವ್‌ ಸರ್ಟಿಫಿಕೆಟ್‌ ಅವಧಿ ಮಹಾರಾಷ್ಟ್ರ ರಾಜ್ಯದಲ್ಲಿ 48 ಗಂಟೆಯ ದಾಗಿದ್ದರೆ ಕರ್ನಾಟಕದಲ್ಲಿ 72 ಗಂಟೆಯ ನಿಯಮ ಇದೆ. 48 ಗಂಟೆಗಳಲ್ಲಿ ವರದಿ ಪಡೆದು ಮುಂಬಯಿಯಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಮುಂಬಯಿಗೆ ತಲುಪುವುದು ಬಲು ಕಷ್ಟ. ಆರ್‌ಟಿಪಿಸಿಆರ್‌ ವರದಿ ಕೈಸೇರಲು ಕನಿಷ್ಠ 24 ಗಂಟೆ ಬೇಕಾಗುತ್ತದೆ. ರೈಲಿನಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿಲ್ಲ. ಮಂಗಳೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆಗೆ ವ್ಯವಸ್ಥೆಯೂ ಇಲ್ಲ.
– ಒಲಿವರ್‌ ಡಿ’ಸೋಜಾ, ಕಾರ್ಯಕಾರಿ ಕಾರ್ಯದರ್ಶಿ, ರೈಲು ಯಾತ್ರಿ ಸಂಘ, ಮುಂಬಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next