21 ದಿನಗಳ ಲಾಕ್‌ಡೌನ್ ಮತ್ತೆ ಮುಂದುವರೆದಿದೆ. ಮೇ.3ರ ತನಕ ವಿಸ್ತರಿಸಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗ ಬಹುತೇಕ ಚಿತ್ರತಾರೆಯರು ಮತ್ತಷ್ಟು ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಆ ಪೈಕಿ ನೀತುಶೆಟ್ಟಿ ವಿಷಯಕ್ಕೆ ಬಂದರೆ, ಅವರೀಗ ಮನೆಯಲ್ಲಿ ಸುಮ್ಮನೆ ಕೂತಿಲ್ಲ. ಮನೆಗೆಲಸವನ್ನೆಲ್ಲಾ ಈಗ ಅವರೇ ವಹಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಒಂದಷ್ಟು ಪುಸ್ತಕ ಓದುತ್ತಿದ್ದಾರೆ, ಬರವಣಿಗೆ ಕೆಲಸವನ್ನೂ ಮುಂದುವರೆಸಿದ್ದಾರೆ. ಸದ್ಯಕ್ಕೆ ಅವರೀಗ ಓನ್ ವಲ್ಡ್ ನಲ್ಲಿದ್ದಾರೆ. ದಿನವೂ ಅವರ ಸ್ನೇಹಿತರ ಜೊತೆ ಮಾತಾಡುತ್ತಿದ್ದಾರೆ. ಅದಕ್ಕೊಂದು ಅವಕಾಶ ಸಿಕ್ಕಿದೆ. “ದಿ ವಿಂಡ್ ಈಸ್ ಮೈ ಮದರ್ ‘ ಎಂಬ ಇಂಗ್ಲೀಷ್ ಪುಸ್ತಕ ಓದುತ್ತಿದ್ದಾರೆ. ಇದರೊಂದಿಗೆ ಕ್ರಿಯೇಟಿವ್ ಆಗಿ ಒಂದಷ್ಟು ಕೆಲಸ ಮಾಡುತ್ತಿದ್ದಾರೆ.
ಸಿನಿಮಾ ನೋಡಿದ್ದಾರೆ. ಇವುಗಳ ನಡುವೆಯೂ ನೀತುಶೆಟ್ಟಿ ತಮ್ಮ ಆಪ್ತ ಗೆಳೆಯರ ಜೊತೆ ಸೇರಿಕೊಂಡು “ಸ್ಯಾಂಡಲ್‌ವುಡ್ ಕೋವಿಡ್ ವಾರಿಯರ್ ‘ ಎಂದ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ನಟ ಸಂತೋಷ್, ನಟಿ ಮಾನಸ ಜೋಶಿ ಸೇರಿದಂತೆ ಒಂದಷ್ಟು ಗೆಳೆಯರು ಈ ತಂಡದಲ್ಲಿದ್ದಾರೆ. ಈ ತಂಡದ ಮೂಲಕ ಅವರು, ತಮ್ಮ ಇನ್‌ಸ್ಟಾಗ್ರಾಂ ಮೂಲಕ ದೇಣಿಗೆ ಸಂಗ್ರಹಿಸಿ, ಅದರಿಂದ ಸುಮಾರು ನಾಲ್ಕು ಸಾವಿರ ಕಾರ್ಮಿಕರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ಊಟದ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದಾರೆ. ಇನ್ನುಳಿದಂತೆ, ಚಿತ್ರರಂಗದ ಕಾರ್ಮಿಕರಿಗೂ 4 ಕೆಜಿ ಅಕ್ಕಿ, ತೊಗರಿಬೇಳೆ, ಎಣ್ಣೆ ಇತರೆ ದಿನಸಿ ವಸ್ತು ವಿತರಿಸಲು ಮುಂದಾಗಿದ್ದಾರೆ. ಸದ್ಯಕ್ಕೆ ಫಿಲ್ಮ್ ಚೇಂಬರ್‌ನ ಪಾರ್ಕಿಂಗ್ ಮಾಡುವ ಜಾಗದಲ್ಲಿ ಕಾರ್ಮಿಕರಿಗೆ ದಿನಸಿ ವಿತರಿಸಲು ಅವಕಾಶ ಪಡೆಯಲಾಗಿದೆ. ಈಗ ದಿನಸಿ ಕಿಟ್ ರೆಡಿಮಾಡಲಾಗುತ್ತಿದೆ. ಲಾಕ್‌ಡೌನ್ ಇದ್ದರೂ ನಮಗೆ ಬೋರ್ ಇಲ್ಲ ಎನ್ನುವ ನೀತುಶೆಟ್ಟಿ, ಕಾರ್ಮಿಕರಿಗೆ ವಿತರಣೆ ಮಾಡಲು ಸದ್ಯ ಅನುಮತಿ ಕೇಳಿದ್ದೇವೆ. ಅನುಮತಿ ದೊರೆತ ನಂತರ ಏ.16 ರಿಂದ 20 ವರೆಗೆ ದಿನಸಿ ವಿತರಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎನ್ನುತ್ತಾರೆ ನೀತುಶೆಟ್ಟಿ