ಬಾಳೆಹೊನ್ನೂರು: 1927ರಲ್ಲಿ ಅತಿವೃಷ್ಟಿಯಾಗಿತ್ತು ಎಂಬ ಮಾಹಿತಿ ಇದೆ. ಆದರೆ, ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರವಾಹ ಉಂಟಾಗಿ ನಿರೀಕ್ಷೆಗೂ ಮೀರಿದ ಹಾನಿ ಸಂಭವಿಸಿದೆ. ಆದ್ದರಿಂದ, ಪ್ರವಾಹ ಸಂತ್ರಸ್ತರ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಸರಕಾರಿ ಪ್ರೌಢಶಾಲಾ ಆವರಣದ ಪರಿಹಾರ ಕೇಂದ್ರದಲ್ಲಿ ಸರಕಾರದ ವತಿಯಿಂದ ನೆರೆ ಸಂತ್ರಸ್ತರಿಗೆ ಅಕ್ಕಿ, ತೊಗರಿಬೇಳೆ, ಸಕ್ಕರೆ ಅಯೋಡಿನ್ ಯುಕ್ತ ಉಪ್ಪು, ತಾಳೆ ಎಣ್ಣೆ, ಸೀಮೆಎಣ್ಣೆ ಹಾಗೂ ಇತರ ಅಡುಗೆ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರವಾಹ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಲು ಬೋಟ್ ಹಾಗೂ ರಿಂಗ್‌ಗಳ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯವಾಗದಂತೆ ಸ್ಥಳೀಯ ಈಜುಗಾರರು, ಅಗ್ನಿ ಶಾಮಕದಳ ಅರಣ್ಯ ಹಾಗೂ ಪೊಲೀಸ್ ಇಲಾಖೆ ಹಾಗೂ ಹಲವಾರು ಕಾರ್ಯಕರ್ತರ ಸಹಕಾರದಿಂದ ಜನರನ್ನು ರಕ್ಷಣೆ ಮಾಡಲಾಗಿದೆ. ಅದಕ್ಕಾಗಿ, ಅವರಿಗೆ ಕೃತಜ್ಞತೆ ತಿಳಿಸುವುದಾಗಿ ತಿಳಿಸಿದರು.
ತಮ್ಮ ಬದುಕಿಗೆ ಬೇಕಾಗುವ ಎಲ್ಲಾ ಪರಿಕರಗಳ ಕಿಟ್ ಅನ್ನು ಇಂದು ವಿತರಿಸಲಾಗಿದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕು. ಅಲ್ಲದೇ, ಸಂತ್ರಸ್ತರಿಗೆ ಗ್ಯಾಸ್ ಸ್ಟೌ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ಸ್ ಮುಖಂಡರಾದ ಸಚಿನ ಮೀಗಾ, ಡಾ| ಅಂಶುಮಂತ್, ಜಿಲ್ಲಾ ಪಂಚಾಯಿತಿ ಸದಸ್ಯ ಸದಾಶಿವ, ಜಿ.ಪಂ. ಸದಸ್ಯೆ ಚಂದ್ರಮ್ಮ, ಬಿ.ಸಿ.ಗೀತಾ, ತಾ.ಪಂ. ಸದಸ್ಯ ಟಿ.ಎಂ.ನಾಗೇಶ್, ಬಿಜೆಪಿ ತಾಲೂಕು ಅಧ್ಯಕ್ಷ ವೆನಿಲ್ಲಾ ಬಾಸ್ಕರ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಇನ್ನರ್ ವ್ಹೀಲ್ ಅಧ್ಯಕ್ಷೆ ಸೀಮಾ, ಕಾಳಜಿ ಕೇಂದ್ರದ ಮಾರ್ಗದರ್ಶಿ ಅಕಾರಿ ನಾಗರಾಜ್, ಮು.ಶಿ.ಕೊಟ್ರೆಶಪ್ಪ, ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಹನೀಫ್, ಬಿ.ಕೆ.ಮಧುಸೂದನ್, ಹಿರಿಯಣ್ಣ, ಮಹಮ್ಮದ್ ಜುಹೇಬ್ ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು.