Advertisement

ಆನದಿನ್ನಿ ಬ್ಯಾರೇಜ್‌ಗೆ ನೀರು ತಲುಪಿಸಿ

06:56 AM May 27, 2019 | Team Udayavani |

ಬಾಗಲಕೋಟೆ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಒಟ್ಟು 2 ಟಿಎಂಸಿ ನೀರು ಬಿಡಲಾಗಿದ್ದು, ಬಾಗಲಕೋಟೆಯ ಆನದಿನ್ನಿ ಬ್ಯಾರೇಜ್‌ವರೆಗೆ ನೀರು ತಲುಪಿಸುವಲ್ಲಿ ತೀವ್ರ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರವಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿಡಕಲ್ ಜಲಾಶಯದಿಂದ ಬಿಡಲಾದ ನೀರು ಬಾಗಲಕೋಟೆ ಜಿಲ್ಲೆಗೆೆ ತಲುಪಲು 7 ಬ್ಯಾರೇಜು ದಾಟಿ ಬರಬೇಕು. ಈ 7 ಬ್ಯಾರೇಜುಗಳಿಂದ ದಾಟಿ ಬಾಗಲಕೋಟೆ ನೀರು ತಲುಪಬೇಕಾದರೆ ಬ್ಯಾರೇಜ್‌ಗಳ ಮೇಲೆ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದರು.

ಪ್ರತಿಯೊಂದು ಬ್ಯಾರೇಜ್‌ಗೆ ನೀರು ತಲುಪಿದಾಗ ಗೇಟ್ ತೆಗೆದ ಬಗ್ಗೆ ಹಾಗೂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದ್ದು, ಅಧಿಕಾರಿಗಳು ತಮಗೆ ಸೂಚಿದ ಬ್ಯಾರೇಜ್‌ಗಳ ಮೇಲೆ ನಿಗಾ ವಹಿಸುವ ಕೆಲಸವಾಗಬೇಕು. ಇಲ್ಲವಾದಲ್ಲಿ ಬಾಗಲಕೋಟೆಗೆ ನೀರು ತಲುಪಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಈ ಹಿಂದೆ ಹಿಡಕಲ್ ಜಲಶಯದಿಂದ ನೀರು ಬಿಟ್ಟಾಗ ಜಿಲ್ಲೆಗೆ ನೀರು ತಲುಪಿಸುವಲ್ಲಿ ಸಣ್ಣ ನೀರಾವರಿ ಇಲಾಖೆ, ಕಂದಾಯ, ಬಿಟಿಡಿಎ ಹಾಗೂ ವಿದ್ಯುತ್‌ ಇಲಾಖೆಗಳು ಸಮನ್ವತೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಕ್ಕೆ ಅಭಿನಂದಿಸಿದ ಜಿಲ್ಲಾಧಿಕಾರಿಗಳು ಈ ಬಾರಿಯು ನೀರು ಸರಾಗವಾಗಿ ಬಂದು ತಲುಪಿಸುವಲ್ಲಿಯೂ ಸಹ ಯಶಸ್ವಿಯಾಗಬೇಕು ಎಂದು ತಿಳಿಸಿದರು.

ಹಿಡಕಲ್ ಜಲಾಶಯದಿಂದ ಬಾಗಲಕೋಟೆಗೆ ನೀರು ಬರಬೇಕಾದರೆ 54 ಕಿ.ಮೀ ದಾಟಿ ಬರಬೇಕು. ಈ ಮದ್ಯೆ ಬೆಳಗಾವಿ ಜಿಲ್ಲೆಯ ಧೂಪದಾಳ, ಸಿಂಗ್ಲಾಪುರ, ಚಿಗದೊಳ್ಳಿ, ಉದಗಟ್ಟಿ, ತಿಗಡಿ, ಸುನದೊಳ್ಳಿ ಹಾಗೂ ಕಮಲದಿನ್ನಿ ಬ್ಯಾರೇಜ ಹಾಗೂ ಬಾಗಲಕೋಟೆಯ ಢವಳೇಶ್ವರ ಮತ್ತು ಬನ್ನಿದಿನ್ನಿ ಬ್ಯಾರೇಜ್‌ಗೆ ನೀರು ತಲುಪಬೇಕು. ನೀರು ತಲುಪುವ ಪ್ರತಿ ಬ್ಯಾರೇಜ್‌ನಲ್ಲಿನ ನೀರಿನ ಹರಿವಿನ ಪ್ರಮಾಣ, ನದಿ ಪಾತ್ರದಲ್ಲಿ ವಿದ್ಯುತ್‌ ಕಡಿತಗೊಳಿಸಿದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಲು ತಿಳಿಸಿದರು.

Advertisement

ಆನದಿನ್ನಿ (ಬನ್ನಿದಿನ್ನಿ) ಬ್ಯಾರೇಜ್‌ಗೆ ಬಂದ ನೀರನ್ನು ಜೂನ್‌ ಮಾಹೆಯವರೆಗೂ ಬಾಗಲಕೋಟೆ ಮತ್ತು ಬೀಳಗಿ ತಾಲೂಕಿನ ಪುನರ್‌ವಸತಿ ಕೇಂದ್ರಗಳು ಹಾಗೂ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಬಳಸಿಕೊಳ್ಳಬೇಕು. ಬಾಗಲಕೋಟೆ ನಗರಕ್ಕೂ ಸಮರ್ಪಕವಾಗಿ ನೀರು ಪೂರೈಸುವ ಕೆಲಸವಾಗಬೇಕು. ಯಾವುದೇ ರೀತಿಯಲ್ಲಿ ನೀರು ಪೋಲಾಗದಂತೆ ನಿಗಾ ವಹಿಸುವುದರ ಜೊತೆಗೆ ಈ ನೀರು ಕೃಷಿ ಚಟುವಟಿಕೆಗೆ ಬಳಕೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ಸದ್ಯ ನದಿ ಮೂಲಕ ಬ್ಯಾರೇಜ್‌ಗಳಿಗೆ ಬಿಟ್ಟ ನೀರು ಕುಡಿಯಲು ಹಾಗೂ ಜಾನುವಾರುಗಳಿಗೆ ಮಾತ್ರ ಬಳಸುವಂತೆ ಸಾರ್ವಜನಿಕರಲ್ಲಿ ಕೋರಿದರು.

ಜಿಪಂ ಉಪಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಮ, ಸಣ್ಣ ನೀರಾವರಿ ಇಲಾಖೆಯ ಎಇಇ ಶಂಭುಲಿಂಗ ಹೆರಲಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಹೇಶ ಕಕರಡ್ಡಿ, ಬಿಟಿಡಿಎ ಎಇಇ ಮೋಹನ ಹಲಗತ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next