Advertisement

ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಸಮವಸ್ತ್ರ-ಪಠ್ಯಪುಸ್ತಕ ವಿತರಿಸಿ

02:01 PM Jun 08, 2019 | Suhan S |

ಯಲಬುರ್ಗಾ: ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ತಾಲೂಕಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಪಠ್ಯ, ಪುಸ್ತಕ ಸಮವಸ್ತ್ರ ವಿತರಣೆ ಮಾಡಲು ಮುಂದಾಗಬೇಕು ಎಂದು ಶಾಸಕ ಹಾಲಪ್ಪ ಆಚಾರ್‌ ಬಿಇಒ ಶರಣಪ್ಪ ವಟಗಲ್ ಅವರಿಗೆ ಸೂಚಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಪಂ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಬಾರದು. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ವಿಳಂಬ ಮಾಡದೇ ಸಮವಸ್ತ್ರ ವಿತರಣೆ ಮಾಡಬೇಕು ಎಂದು ಹೇಳಿದರು.

ಬಿಇಒ ಶರಣಪ್ಪ ವಟಗಲ್ ಮಾತನಾಡಿ, ಈಗಾಗಲೇ ತಾಲೂಕಿನ ಎಲ್ಲಾ ಶಾಲೆಗಳಿಗೆ ಪಠ್ಯ, ಪುಸ್ತಕ ವಿತರಣೆ ಮಾಡಲಾಗಿದೆ. ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಕರೆದುಕೊಂಡು ವಿತರಣೆ ಮಾಡಲು ತಿಳಿಸಲಾಗಿದೆ ಎಂದರು.

ಈಗಾಗಲೇ ತಾಲೂಕಿನಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಮಳೆಯಾದ ತಕ್ಷಣವೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ವಿತರಣೆ ಮಾಡಲು ದರ ನಿಗದಿ ಮತ್ತು ಇನ್ಯಾವುದೋ ನೆಪ ಹೇಳಿ ವಿಳಂಬ ಮಾಡಬೇಡಿ. ಮಳೆಯಾದ ನಂತರ ಕೆಲ ದಿನಗಳು ಕಳೆದರೇ ಮಣ್ಣಿನ ತೇವಾಂಶ ಕಡಿಮೆಯಾಗುತ್ತದೆ. ರೈತ ಸಂಪರ್ಕ ಕೇಂದ್ರಕ್ಕೆ ರೈತರು ಬಂದರೆ ಯಾವುದೇ ಜನಪ್ರತಿನಿಧಿಗಳನ್ನು ಕಾಯದೇ ವಿತರಣೆ ಆರಂಭಿಸುವಂತೆ ತಿಳಿಸಿದರು.

ಕೃಷಿ ಅಧಿಕಾರಿ ಹಾರೋನ ರಾಶೀಸ್‌ ಪ್ರತಿಕ್ರಿಯಿಸಿ, ಈಗಾಗಲೇ ತಾಲೂಕಿನ ಕುಕನೂರು, ಹಿರೇವಂಕಲಕುಂಟಾ, ತಳಕಲ್, ಮಂಗಳೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಸಂಗ್ರಹಿಸಲಾಗಿದೆ. ರೈತರಿಗೆ ವಿತರಣೆ ಮಾಡಲಾಗುವುದು ಎಂದರು.

Advertisement

ತಾಲೂಕಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಕಾಮಗಾರಿ ಮಾಡದೇ ಬೋಗಸ್‌ ಬಿಲ್ ಎತ್ತುವಳಿ ಮಾಡಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಇವರ ಮೇಲೆ ಕ್ರಮ ಜರುಗಿಸಲು ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು.

ಚಿಕ್ಕಮ್ಯಾಗೇರಿ ಕ್ಷೇತ್ರದ ಜಿಪಂ ಸದಸ್ಯ ಗಿರಿಜಾ ಸಂಗಟಿ ಮಾತನಾಡಿ, ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ನಲ್ಲಿ, ನಳಗಳಿಗೆ ಶ್ರೀಮಂತ ಖಾಸಗಿ ವ್ಯಕ್ತಿಗಳು ಮೋಟಾರ್‌ ಬಳಸಿ ನೀರು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಬಡ ಜನತೆಗೆ ನೀರು ಸಿಗದಂತಾಗಿದ್ದು, ಇದನ್ನು ತಡೆಗಟ್ಟಿ ಎಂದರು. ಮಧ್ಯ ಪ್ರವೇಶಿಸಿದ ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ಗ್ರಾಪಂ ಪಿಡಿಒ ಇಂತಹ ಪ್ರಕರಣಗಳ ಬಗ್ಗೆ ಗಮನಹರಿಸಿ ಮೋಟಾರ್‌ ಬಳಸುವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲು ಮುಂದಾಗಿ ಮತ್ತೆ ಇಂತಹ ಪ್ರಕರಣಗಳು ಮರುಕಳುಹಿಸಿದಂತೆ ನೋಡಿಕೊಳ್ಳಿ ಎಂದರು.

ಇಟಗಿ ಜಿಪಂ ಸದಸ್ಯ ಗಂಗಮ್ಮ ಗುಳಗಣ್ಣನವರ ಮಾತನಾಡಿ, ಚಿಕ್ಕೊಪ್ಪದಲ್ಲಿ ತಾಲೂಕಾಡಳಿತದ ವತಿಯಿಂದ ಆರಂಭಿಸಲಾದ ಗೋಶಾಲೆಯಲ್ಲಿ ಮೇವು ಕೊರತೆ ಇದೆ. ಜಾನುವಾರುಗಳಿಗೆ ಮೇವು ಇಲ್ಲದೇ ಮಾಲೀಕರು ಜಾನುವಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದರು. ಈ ವೇಳೆ ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ಪಶು ಇಲಾಖೆ ಹಾಗೂ ಕಂದಾಯ ಇಲಾಖೆಯವರು ಗೋಶಾಲೆಯಲ್ಲಿ ಮೇವಿನ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು, ಶೀಘ್ರದಲ್ಲೇ ಮೇವು ಸಂಗ್ರಹಣೆ ಮುಂದಾಗಿ ಮತ್ತೆ ರೈತರಿಂದ ದೂರುಗಳು ಬಂದರೇ ಕ್ರಮಕ್ಕೆ ಮುಂದಾಗುತ್ತೇನೆ ಎಂದರು.

ಪಟ್ಟಣ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕರ್ತವ್ಯ ಅವಧಿಯಲ್ಲಿ ಇರುವುದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಕರ್ತವ್ಯ ಅವಧಿಯಲ್ಲಿ ಸಾರ್ವಜನಿಕರಿಗೆ, ರೋಗಿಗಳಿಗೆ ಲಭ್ಯವಾಗುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.

ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್, ಜಿಪಂ ಸದಸ್ಯರು, ತಹಶೀಲ್ದಾರ್‌ ವೈ.ಬಿ. ನಾಗಠಾಣ, ನೀಲಪ್ರಭಾ, ಇಒ ಲಕ್ಷ್ಮೀಪತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next