ಮುಧೋಳ: ಸರ್ಕಾರ ಸಾರ್ವಜನಿಕರಿಗೆ ಸ್ವಂತ ಸೂರು ನಿರ್ಮಿಸಿಕೊಳ್ಳಲು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಹೆಚ್ಚು ಜನರಿಗೆ ಸೌಲಭ್ಯ ದೊರೆಯುವಂತೆ ಕಾರ್ಯನಿರ್ವಹಿಸಬೇಕು ಎಂದು ನಗರಸಭೆ ಪೌರಾಯುಕ್ತ ಸುನೀಲ ಪಾಟೀಲ ಹೇಳಿದರು.
ನಗರಸಭೆ ಕಚೇರಿಯಲ್ಲಿ ಸೋಮವಾರ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2022ರೊಳಗೆ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಜಾರಿಗೆ ತಂದಿದ್ದು, ನಗರಸಭೆ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಅರ್ಹರಿಗೆ ಯೋಜನೆಯ ಲಾಭ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್‌ನಡಿ ಪ್ರತಿಯೊಬ್ಬರೂ ತಾವು ನಿರ್ಮಿಸಿಕೊಳ್ಳುವ ಮನೆಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಹಾಗೂ ಬ್ಯಾಂಕ್ ಬಡ್ಡಿ ದರಕ್ಕೆ ಸಬ್ಸಿಡಿ ನೀಡಲಾಗುವುದು. ಸ್ವಂತವಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು 1.50 ಲಕ್ಷ ಸಹಾಯಧನ ನೀಡಲಾಗುವುದು ಎಂದು ಹೇಳಿದರು.
ನಗರಸಭೆ ಸದಸ್ಯ ಗುರುಪಾದ ಕುಳಲಿ ಮಾತನಾಡಿ, ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನೆರವು ನೀಡುತ್ತದೆ. ಆದರೆ ಬ್ಯಾಂಕ್‌ನವರು ಸಾಲ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಾರೆ. ಅಲ್ಲದೆ ಈ ಮೊದಲು ಸಾರ್ವಜನಿಕರು ಮನೆಗಾಗಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಫಲಾನುಭವಿಗಳ ಆಯ್ಕೆಯಾಗಿಲ್ಲ ಎಂದರು.
ಈ ವೇಳೆ ಮಾತನಾಡಿದ ಪೌರಾಯುಕ್ತ ಪಾಟೀಲ, ಈ ಬಗ್ಗೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಭೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು. ಈ ಹಿಂದೆ ಸಾರ್ವಜನಿಕರು ಮನೆಗಾಗಿ ಅರ್ಜಿ ಸಲ್ಲಿಸಿದ್ದು, ಮುಂದಿನ ತಿಂಗಳು ಫಲಾನುಭವಿಗಳ ಪಟ್ಟಿ ತಯಾರಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ನಗರಸಭೆ ಸದಸ್ಯ ಡಾ| ಸತೀಶ ಮಲಘಾಣ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರ ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯಬೇಕು. ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಅನಧಿಕೃತ ಜಾಹೀರಾತುಗಳನ್ನು ಅಂಟಿಸದಂತೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಶೌಚಾಲಯಗಳ ಸಮಸ್ಯೆಯಾಗುತ್ತಿದ್ದು, ಅವುಗಳ ಸೂಕ್ತ ನಿರ್ವಹಣೆ ಹಾಗೂ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಬೇಕು. ಮುಂದಿನ ವರ್ಷ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರೆ ನಡೆಯಲಿದ್ದು, ಜಾತ್ರೆಯಲ್ಲಿ ತೊಂದರೆ ಉಂಟಾಗದಂತೆ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಆಭಿಪ್ರಾಯ ವ್ಯಕ್ತಪಡಿಸಿದರು.
ಶೀಘ್ರದಲ್ಲಿ ಸಭೆ: ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಲು ಶೀಘ್ರದಲ್ಲಿ ಸಾರ್ವಜನಿಕರ ಹಾಗೂ ಸದಸ್ಯರ ಸಭೆ ಕರೆಯಲಾಗುವುದು. ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸದಸ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು. ನಗರಸಭೆ ಸದಸ್ಯರಾದ ವಿನೋದ ಕಲಾಲ, ಅಲ್ಲಾಭಕ್ಷ ಕೊಣ್ಣೂರ, ಹನಮಂತ ತೇಲಿ, ಯೂಸೂಪ್ ಜಮಾದಾರ, ಕಚೇರಿ ವ್ಯವಸ್ಥಾಪಕಿ ಭಾರತಿ ಜೋಶಿ ಇತರರಿದ್ದರು.