ತಿ.ನರಸೀಪುರ: ಸರ್ಕಾರದ ವಿವಿಧ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ದೊರಕಿಸುವಂತೆ ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು. ಪಟ್ಟಣದ ತಾಪಂ ಮುಂಭಾಗದಲ್ಲಿ ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗೆ ಮಾರ್ಗದರ್ಶನ: ಸರ್ಕಾರ ಅನೇಕ ಸೌಲಭ್ಯಗಳನ್ನು ವಿವಿಧ ಇಲಾಖೆಗಳ ಮೂಲಕ ನೀಡುತ್ತಿದೆ. ಆದರೆ ಸಕಾಲದಲ್ಲಿ ಸೌಲಭ್ಯಗಳು ಫಲಾನುಭವಿಗಳಿಗೆ ಸಿಗುತ್ತಿಲ್ಲ. ಕೃಷಿ ಚಟುವಟಿಕೆಗೆ ನೀಡುವ ಬಿತ್ತನೆ ಬೀಜ, ಗೊಬ್ಬರ ಇನ್ನಿತರ ಸವಲತ್ತುಗಳು ಸಕಾಲದಲ್ಲಿ ಸಿಗಬೇಕು. ಕೃಷಿ ಮತ್ತು ನೀರಾವರಿ ಇಲಾಖೆಗಳು ರೈತರಿಗೆ ಅನುಕೂಲ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಚರ್ಚೆ ಮಾಡಿ ತೊಂದರೆಯಾಗದಂತೆ ಮಾರ್ಗದರ್ಶನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೌಲಭ್ಯಗಳ ಮಾಹಿತಿ: ಕೃಷಿ, ತೋಟಗಾರಿಕೆ, ಪಶುಸಂಗೋಪನಾ, ಕಂದಾಯ ಅರಣ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಪಿಎಂಸಿ, ಮೀನುಗಾರಿಕೆ ಹಾಗೂ ಸಾಲಸೌಲಭ್ಯ ನೀಡುವ ಸಂಸ್ಥೆಗಳು ಕೃಷಿ ಪರಿಕರ ಮಾರಾಟ ಮಾಡುವ ಸಂಘ, ಸಾವಯವ ಕೃಷಿಕರ ಸಂಘ, ಕೆವಿಕೆ ವಿಜ್ಞಾನಿಗಳು ಹಾಗೂ ಸಹಕಾರ ಇಲಾಖೆಗಳ ಸಹಯೋಗದಲ್ಲಿ ಈ ಕೃಷಿ ಅಭಿಯಾನ ನಡೆಯುತ್ತಿದ್ದು ಜನಸಾಮಾನ್ಯರಿಗೆ ಇಲಾಖೆಗಳ ಸೌಲಭ್ಯ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ತಾಪಂ ಅಧ್ಯಕ್ಷ ಚೆಲುವರಾಜು ಮಾತನಾಡಿ, ಸರ್ಕಾರದ ಸವಲತ್ತುಗಳು ರೈತರಿಗೆ ಸಿಗುವಂತಾಗಬೇಕು. ಅಧಿಕಾರಿಗಳು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಫಲಾನುಭವಿಗಳಿಗೆ ನೇರವಾಗಿ ಸವಲತ್ತು ದೊರಕಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಾಜು, ಇಒ ಡಾ.ನಂಜೇಶ್, ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ್, ಸಹಾಯಕ ನಿರ್ದೇಶಕ ಎನ್. ಕೃಷ್ಣಮೂರ್ತಿ, ತಾಪಂ ಸದಸ್ಯರಾದ ರಮೇಶ್, ಸಾಜಿದ್ ಆಹ್ಮದ್, ಬಿಎಸ್‌ಪಿ ಮುಖಂಡ ಕೆ. ಎನ್. ಪ್ರಭುಸ್ವಾಮಿ, ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ಣ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ದೀಪು ದರ್ಶನ್, ಸತೀಶ್ ಮತ್ತಿತರರಿದ್ದರು.