Advertisement

ಪ್ರಧಾನಿ ಮೋದಿ ಸಂದೇಶ ಮನೆ ಮನೆಗೆ ತಲುಪಿಸಿ

07:39 AM Jun 12, 2020 | Suhan S |

ಮುದ್ದೇಬಿಹಾಳ: ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಎರಡನೇ ಅವಧಿಯನ್ನು ಯಶಸ್ಸಿನೊಂದಿಗೆ ಪೂರೈಸುವತ್ತ ದಾಪುಗಾಲಿಡುತ್ತಿದೆ. ತಮ್ಮ ಆಡಳಿತದ ಯಶಸ್ಸಿನ ಪಾಲುದಾರರಾಗಿರುವ ಜನತೆಗೆ ಮೋದಿ ಅವರು ಪತ್ರ ಬರೆದಿದ್ದು, ಆ ಪತ್ರರೂಪದ ಕರಪತ್ರಗಳನ್ನು ಪ್ರತಿ ಮನೆಗೂ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

Advertisement

ಇಲ್ಲಿನ ದಾಸೋಹ ನಿಲಯದಲ್ಲಿ ಗುರುವಾರ ಸಂಜೆ ಬಿಜೆಪಿ ಮುದ್ದೇಬಿಹಾಳ ಮಂಡಲ ಪ್ರಮುಖರು, ಬೂತ್‌ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರ ಸಂದೇಶವನ್ನು ಜನತೆಗೆ ತಲುಪಿಸುತ್ತಿದ್ದಾರೆ. ಇದು ಎಲ್ಲ ಕಡೆಯೂ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಪಕ್ಷವನ್ನು ಕೆಳಮಟ್ಟದಿಂದ ಇನ್ನಷ್ಟು ಬಲಪಡಿಸಲು ಮುಂದಾಗಬೇಕು ಎಂದರು.

ಕರ್ನಾಟಕದಲ್ಲಿ ಕೋವಿಡ್  ನಿಯಂತ್ರಣದಲ್ಲಿರುವುದಕ್ಕೆ ಸಿಎಂ ಯಡಿಯೂರಪ್ಪ ಅವರ ಸಮಯೋಚಿತ ನಿರ್ಧಾರಗಳು ಕಾರಣ. ರಾಜ್ಯ ಬಿಜೆಪಿಯಿಂದ ಕೋವಿಡ್  ಸಂಕಷ್ಟಕ್ಕೆ ಸಾಕಷ್ಟು ಸ್ಪಂದನೆ ದೊರೆತಿದೆ. ಈ ಸಂದರ್ಭ ನಮ್ಮ ಜವಾಬ್ದಾರಿ, ನಮ್ಮ ಕರ್ತವ್ಯಗಳ ಕುರಿತು ಪ್ರಧಾನಿಯವರು ನೀಡಿರುವ ನಿರ್ದೇಶನಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಮಂಡಲ ಅಧ್ಯಕ್ಷ ಡಾ| ಪರಶುರಾಮ ಪವಾರ ಮಾತನಾಡಿ, ಈಗಾಗಲೇ ಈ ಭಾಗದಲ್ಲಿ ಪಕ್ಷ ಸಾಕಷ್ಟು ಬಲಿಷ್ಟವಾಗಿದೆ. ಕೇಂದ್ರದಲ್ಲಿ ಮೋದಿ ಅವರು, ರಾಜ್ಯದಲ್ಲಿ ಯಡಿಯೂರಪ್ಪ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಕಷ್ಟಕಾಲದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಎರಡೂ ಸರ್ಕಾರಗಳ ಸಾಧನೆಯನ್ನು ಸಾಮಾನ್ಯ ಜನರಿಗೆ ತಲುಪಿಸುವ ಹೊಣೆ ಬೂತ್‌ ಮಟ್ಟದ ಮುಖಂಡರ ಮೇಲಿದೆ ಎಂದರು.

ಮಲಕೇಂದ್ರಗೌಡ ಪಾಟೀಲ, ಶಿವಶಂಕರ ಹಿರೇಮಠ, ವಾಸುದೇವ ಹೆಬಸೂರ, ಮುತ್ತಪ್ಪ ಚಮಲಾಪುರ, ಮಲ್ಲಿಕಾರ್ಜುನ ತಂಗಡಗಿ, ಮುತ್ತಣ್ಣ ಹುಂಡೇಕಾರ, ಬಸವರಾಜ ಗುಳಬಾಳ, ಲಕ್ಷ್ಮಣ ಬಿಜ್ಜೂರ, ಅಶೋಕ ರಾಠೊಡ ನೇಬಗೇರಿ, ಬಿ.ಜಿ.ಜಗ್ಗಲ್‌ ವಕೀಲರು, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಗೌರಮ್ಮ ಹುನಗುಂದ, ಶಿಲ್ಪಾ ಶರ್ಮಾ, ಸುಭಾಷ ಕಾಳಗಿ, ಬಸವರಾಜ ಚಿಂತಾಮಣಿ, ಮಂಜುನಾಥ ರತ್ನಾಕರ, ಶಿವನಗೌಡ ತಾಳಿಕೋಟ ಸೇರಿದಂತೆ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಭಾಗದ ಬೂತ್‌ ಮಟ್ಟದ ಮುಖಂಡರು ಪಾಲ್ಗೊಂಡಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next