ದಾವಣಗೆರೆ: ಪ್ರಕೋಷ್ಠಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪಕ್ಷ ಚಟುವಟಿಕೆಯಲ್ಲಿ ಸಕ್ರಿಯರಾಗಬೇಕು. ಸರ್ಕಾರದ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಜನರ ಮನ ಗೆಲ್ಲಬೇಕು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.
ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಪ್ರಕೋಷ್ಠಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಇಂದಿಗೂ ಅನಕ್ಷರಿದ್ದಾರೆ. ಸರ್ಕಾರದ ಸೌಲಭ್ಯ ಏನಿದೆ? ಹೇಗೆ ಪಡೆಯಬೇಕು ಎಂಬ ಮಾಹಿತಿ ಇಲ್ಲದವರೂ ಇದ್ದಾರೆ. ಅವರಿಗೆ ನಾವು ಸೌಲಭ್ಯ ದೊರಕಿಸಿಕೊಡುವ ಕೆಲಸ ಮಾಡಿದರೆ, ಅದು ಮುಂದೆ ನಮಗೆ ಹಾಗೂ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದರು.
ನಾನು ಮೊದಲು ಜನಸಾಮಾನ್ಯರಿಗೆ ಕಚೇರಿಗೆ ಕರೆದುಕೊಂಡು ಬಂದು ಸೌಲಭ್ಯ ಕೊಡಿಸಿ, ಮತ್ತೆ ಬಸ್ ಹತ್ತಿಸಿ ಕಳುಹಿಸುತ್ತಿದ್ದೆ. ಆ ರೀತಿಯ ಕೆಲಸಗಳ ಕಾರಣದಿಂದಿಲೇ ಇಂದು ನಾವು ಐದು ಬಾರಿ ಶಾಸಕನಾಗಿ ಆಯ್ಕೆಯಾಗಲು ಕಾರಣವಾದವು. ಈಗ ಕೆಲಸ ಮಾಡಿದರೆ ನಾಳೆಯೇ ಫಲ ಕೊಡುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಪ್ರಕೋಷ್ಠದ ಕಾರ್ಯಕರ್ತರು ಸಹ ಜನರಿಗೆ ಸೇವೆ ಒದಗಿಸುವ ಕಾರ್ಯ ಮಾಡಬೇಕು. ಇದರಿಂದ ಪಕ್ಷಕ್ಕೂ, ವೈಯಕ್ತಿಕ ಬೆಳವಣಿಗೆಗೂ ಲಾಭವಾಗುತ್ತದೆ ಎಂದರು.
ಒಂದು ಕಾಲದಲ್ಲಿ ನಾವು ಗ್ರಾಮಮಟ್ಟದಲ್ಲಿ ಪಕ್ಷ ಸಂಘಟನೆ ಆರಂಭಿಸಿದ್ದೇವು. ಆ ಸಮಯದಲ್ಲಿ ಅಲ್ಲಿಯ ಸಮಸ್ಯೆಗಳ ಬಗ್ಗೆ ಜನರು ಹೇಳುತ್ತಿದ್ದರು. ಜನರ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತಿದ್ದೇವು. ಬಿಜೆಪಿ ತಳಮಟ್ಟದಿಂದ ಬೆಳೆದು ಬಂದ ಪಕ್ಷ. ಜನರಿಗೆ ಸ್ಪಂದಿಸುವ ಕಾರಣದಿಂದಲೇ ಇಂದು ಪಕ್ಷ ದೇಶ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಚುಕ್ಕಾಣಿ ಹಿಡಿದಿದೆ ಎಂದರು.
ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಡಾ| ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ರಾಜ್ಯ ನಾಯಕರು ನಮ್ಮ ಜಿಲ್ಲೆಯನ್ನು ಶಕ್ತಿ ಕೇಂದ್ರ ಎಂದು ಗುರುತಿಸಿದ್ದಾರೆ.ನಮ್ಮ ಜಿಲ್ಲೆಗೆ ರಾಮಜ್ಯೋತಿ ಬಂದ ನಂತರ ಹಿಂದುತ್ವದ ಆಧಾರದ ಮೇಲೆ ಪಕ್ಷ ಸಂಘಟನೆ ಆಯಿತು. ಇಂದು ಕಾರ್ಯಕರ್ತರ ಪರಿಶ್ರಮದಿಂದಲೇ ಜಿಲ್ಲೆ ಶಕ್ತಿಕೇಂದ್ರವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯಲ್ಲಿ ಪ್ರಕೋಷ್ಠಗಳ ಸಮಾವೇಶ ನಡೆಯುತ್ತಿದೆ. ಪ್ರಕೋಷ್ಠದ ಕಾರ್ಯಕರ್ತರಾದವರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಬಿಜೆಪಿ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಬೇಕು.ಇದು ಚುನಾವಣಾ ವರ್ಷವಾದ್ದರಿಂದ ಜನರಿಗೆ ನಮ್ಮ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದರು.
ಇಂದು ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್‌ನ ಕೊರತೆಯನ್ನು ಜನರಿಗೆ ತಿಳಿಸುವ ಜತೆಗೆ ಬಿಜೆಪಿಯ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ತಂಡವಾಗಿ ಪಕ್ಷ ಗಟ್ಟಿಗೊಳಿಸಿ ದೇಶದ ಬೆಳವಣಿಗೆಗೆ ಮುಂದಾಗಬೇಕು. ದೇಶ ಮೊದಲು ಎಂಬ ಮನೋಭಾವದೊಂದಿಗೆ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಅಧ್ಯಕ್ಷ ತೆ ವಹಿಸಿದ್ದರು. ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಪ್ರಮುಖರಾದ ಸುಧಾ ಜಯರುದ್ರೇಶ್, ಎಲ್.ಎನ್ ಕಲ್ಲೇಶ್, ಶಿವಶಂಕರ್, ಬಿ.ಎಸ್ ಜಗದೀಶ್, ಸೊಕ್ಕೆ ನಾಗರಾಜ್ ಇನ್ನಿತರರು ಸಮಾವೇಶದಲ್ಲಿದ್ದರು.