Advertisement

ಪೌರ ಕಾರ್ಮಿಕರಿಗೆ ಸೌಲಭ್ಯ ತಲುಪಿಸಿ

04:07 PM Mar 18, 2022 | Niyatha Bhat |

ಶಿವಮೊಗ್ಗ: ಎಲ್ಲ ಸ್ಥಳೀಯ ಮತ್ತು ಇತರೆ ಸಂಸ್ಥೆಗಳು ಪೌರ ಕಾರ್ಮಿಕರಿಗೆ ಸರ್ಕಾರ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ತಲುಪಿಸಬೇಕು ಹಾಗೂ ಕಾರ್ಮಿಕರನ್ನು ಕಾಳಜಿಯಿಂದ ನೋಡಿಕೊಳ್ಳಬೇಕೆಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರ ಸಮಸ್ಯೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿವಿಧ ಸ್ಥಳೀಯ ಸಂಸ್ಥೆಗಳು ಪೌರ ಕಾರ್ಮಿಕರಿಗೆ ವೇತನ, ಪಿಎಫ್‌, ಇಎಸ್‌ಐ ಸರಿಯಾಗಿ ನೀಡಲಾಗುತ್ತಿದೆಯೇ ಎಂದು ಪರೀಕ್ಷಿಸಬೇಕು.

ಕಾರ್ಮಿಕ ಇಲಾಖೆ ಅಧಿಕಾರಿಗಳು, ವಿವಿಧ ಏಜೆನ್ಸಿಯವರು ಕಾರ್ಮಿಕರಿಗೆ ಪ್ರತಿ ತಿಂಗಳು ನಿಗದಿಪಡಿಸಲಾದ ವೇತನ ಮತ್ತು ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿದ್ದಾರೆಯೇ ಎಂದು ಪರೀಕ್ಷಿಸಿ ವರದಿ ನೀಡಬೇಕೆಂದರು. ಪಾಲಿಕೆ ಆಯುಕ್ತ ಮಾಯಣ್ಣಗೌಡ ಪ್ರತಿಕ್ರಿಯಿಸಿ, ನಗರದಲ್ಲಿ ಸುಮಾರು 50 ಸಾವಿರ ಇನ್‌ಸ್ಯಾನಿಟರಿ ಶೌಚಾಲಯಗಳಿದ್ದು ಈ ಪೈಕಿ 32 ಸಾವಿರ ಶೌಚಾಲಯಗಳನ್ನು ಸ್ಯಾನಿಟರಿ ಶೌಚಾಲಯವಾಗಿ ಪರಿವರ್ತಿಸಲಾಗಿದೆ. ಇನ್ನುಳಿದ ಶೌಚಾಲಯಗಳ ಬಗ್ಗೆ ಕೂಡ ಕ್ರಮ ವಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 2ನೇ ಹಂತದ ಸರ್ವೇಯಲ್ಲಿ ಕೇವಲ 5 ಜನ ಮ್ಯಾನುಯಲ್‌ ಸ್ಕಾವೆಂಜರ್‌ಗಳನ್ನು ಗುರುತಿಸಲಾಗಿದೆ. ಮ್ಯಾನುಯಲ್‌ ಸ್ಕಾವೆಂಜರ್‌ಗಳನ್ನು ಗುರುತಿಸುವುದರಿಂದ ಅವರಿಗೆ ಕೆಲವು ಸೌಲಭ್ಯಗಳು ದೊರೆತು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ. ಆದ್ದರಿಂದ ಮತ್ತೊಮ್ಮೆ ಸರ್ವೇ ನಡೆಸಿ ಅರ್ಹರನ್ನು ಗುರುತಿಸಬೇಕು. ಹಾಗೂ ಎಂ.ಎಸ್‌ ಕಾಯ್ದೆ ಪ್ರಕಾರ ಜಿಲ್ಲಾ ಮಟ್ಟ ಮತ್ತು ಉಪವಿಭಾಗ ಮಟ್ಟದಲ್ಲಿ ನಿಯಮಿತವಾಗಿ ಸಫಾಯಿ ಕರ್ಮಚಾರಿಗಳ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕ್ರಮ ವಹಿಸಬೇಕು ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್‌ ಮಾತನಾಡಿ, ಜಿಲ್ಲೆಯಲ್ಲಿ 259 ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮತ್ತು 350 ಪೌರಕಾರ್ಮಿಕರಿಗೆ ಅಂಬೇಡ್ಕರ್‌ ಮತ್ತು ವಾಜಪೇಯಿ ವಸತಿ ಯೋಜನೆಯಡಿ ವಸತಿ ಕಲ್ಪಿಸಲಾಗಿದೆ. ಹಾಗೂ ಖಾಲಿ ಇರುವ ಹುದ್ದೆಗಳನ್ನು ತುಂಬಲು ಸರ್ಕಾರಕ್ಕೆ ಬರೆಯಲಾಗಿದೆ ಎಂದರು.

Advertisement

ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಚಿನ್ನಯ್ಯ ಮಾತನಾಡಿ, ನಿಗಮದಿಂದ ಸಾಲ ಮತ್ತು ಇತರೆ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳು ಸಫಾಯಿ ಕರ್ಮಚಾರಿ ದೃಢೀಕರಣ ಪತ್ರವನ್ನು ಹಾಗೂ ಇತರೆ ಸೌಲಭ್ಯಗಳನ್ನು ಸಕಾಲದಲ್ಲಿ ನೀಡುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next