ಭಾಲ್ಕಿ: ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ, ಪಿಜಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಶಿಷ್ಯವೇತನ ಸಿಗುತ್ತಿಲ್ಲ, ಇದಕ್ಕಾಗಿ ವಿದ್ಯಾರ್ಥಿಗಳು ಅಲೆಯುತ್ತಿದ್ದಾರೆ. ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಯಾವೊಬ್ಬ ವಿದ್ಯಾರ್ಥಿಯೂ ಶಿಷ್ಯವೇತನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದುವರೆಗೂ ಎಷ್ಟು ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮುಟ್ಟಿದೆ. ವಂಚಿತರಾಗಿರುವವರ ಸಂಖ್ಯೆ, ಪ್ರಸ್ತುತ ವರ್ಷ ಎಷ್ಟು ವಿದ್ಯಾರ್ಥಿಗಳು ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ತಕ್ಷಣಕ್ಕೆ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತಹಶೀಲ್ದಾರ್ ಕಚೇರಿ ವ್ಯಾಪ್ತಿಯ ಸರ್ವೇ ನಂ.182ರ ಜಮೀನು ಒತ್ತುವರಿ ಆಗುತ್ತಿದ್ದು ಕೂಡಲೇ ತೆರವುಗೊಳಿಸಬೇಕು ಎಂದರು.
ತಹಶೀಲ್ದಾರ್ ವ್ಯಾಪ್ತಿಯಲ್ಲಿ ಓದುಗರ ಅನುಕೂಲಕ್ಕಾಗಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಗ್ರಂಥಾಲಯಕ್ಕೆ ಹೋಗುವ ದಾರಿ ಒತ್ತುವರಿ ಆಗಿದ್ದು, ಇದರಿಂದ ಸುಸಜ್ಜಿತ ಕಟ್ಟಡ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಹಿಂದೆಯೂ ಈ ಬಗ್ಗೆ ಅಧಿಕಾರಿಗಳಿಗೆ ಒತ್ತುವರಿ ಜಮೀನು ತೆರವುಗೊಳಿಸುವಂತೆ ಸೂಚಿಸಿದ್ದೆ. ಆದರೆ, ಪ್ರಯೋಜನವಾಗಿಲ್ಲ. ತಹಸೀಲ್ ವ್ಯಾಪ್ತಿಯ ಜಮೀನೇ ಒತ್ತುವರಿ ಆದರೆ ಜನಸಾಮಾನ್ಯರ ಗತಿ ಏನು? ಎಂದು ತಾಲೂಕು ಆಡಳಿತದ ವೈಖರಿ ಪ್ರಶ್ನಿಸಿದ ಅವರು, ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಜರುಗಿಸಿ ಒತ್ತುವರಿ ಜಮೀನು ತೆರವುಗೊಳಿಸಿ ಗ್ರಂಥಾಲಯಕ್ಕೆ ಹೋಗಲು ದಾರಿ ಮಾಡಿಕೊಡಬೇಕು ಎಂದರು.
ತಾಲೂಕಿನಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಚಂದಾಪುರ, ಮಾಣಿಕೇಶ್ವರ, ಜೀರಗ್ಯಾಳ ವ್ಯಾಪ್ತಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ, ಅವುಗಳಿಂದ ನೀರು ಸೋರಿಕೆ ಆಗುತ್ತಿದೆ. ಅವುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಬೇಕು. ಕಳಪೆ ಕೆಲಸ ಆಗಿದ್ದರೆ ಸಂಬಂಧಿತ ಗುತ್ತಿಗೆದಾರರ ಗಮನಕ್ಕೆ ತಂದು ಸರಿಪಡಿಸಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದರು.
ಒಬ್ಬರೇ ಶಿಕ್ಷಕರು ಇರುವ ಶಾಲೆ, ಕನ್ನಡ ಶಿಕ್ಷಕರು ಇಲ್ಲದಿರುವುದು, ಕುಡಿವ ನೀರು, ಶಾಲಾ ಕಟ್ಟಡ, ಶಿಥಿಲ ಕಟ್ಟಡ, ಶೌಚಾಲಯ, ಗ್ರಂಥಾಲಯ, ಕಾಂಪೌಂಡ್ ಇತರೆ ಮೂಲ ಸೌಕರ್ಯಗಳ ಕೊರತೆ ಇದ್ದರೆ ಅವುಗಳನ್ನು ಪಟ್ಟಿ ಮಾಡಿ ಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರು ಸೂಚನೆ ನೀಡಿದರು.