ತಿ.ನರಸೀಪುರ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಕಜ್ಜಾಯ ವಿತರಿಸಿ ಸಂಭ್ರಮಿಸಿದರು.
2 ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತಿದ್ದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಮುಖಂಡರು, ಪಕ್ಷದ ಬಾವುಟ ಹಿಡಿದು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್ ಮಾತನಾಡಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲೆಕಚ್ಚಿದೆ. ಹೀಗಾಗಿ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹಿನ್ನೆಡೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಗಳು, ಕ್ರಾಂತಿಕಾರಕ ನಿರ್ಣಯಗಳು ಜನಮೆಚ್ಚುಗೆ ಗಳಿಸಿವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭೈರಾಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ವೀರಭದ್ರಪ್ಪ, ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಯಕತ್ವಕ್ಕೆ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಜನರಿಂದ ಮಾನ್ಯತೆ ಸಿಕ್ಕಂತಾಗಿದೆ.
ರಾಜ್ಯದಲ್ಲಿಯೂ ಕಾಂಗ್ರೆಸ್ ಆಡಳಿತ ಕೊನೆಗಾಣಲಿದೆ. ನರಸೀಪುರ ಮತ್ತು ವರುಣಾ ವಿಧಾನಸಭಾ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಜಿಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಕ್ಷೇತ್ರಾಧ್ಯಕ್ಷ ಎಚ್.ಎಂ.ಪರಶಿವಮೂರ್ತಿ,
ಗ್ರಾಪಂ ಮಾಜಿ ಅಧ್ಯಕ್ಷ ಕುರುಬೂರು ವೀರೇಶ್, ಗ್ರಾಪಂ ಮಾಜಿ ಸದಸ್ಯ ನಾಗರಾಜು(ತಾತ), ತಾಪಂ ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಕರೋಹಟ್ಟಿ ಬಸವರಾಜು, ದಿಲೀಪ, ಸೋಸಲೆ ಮಂಜುನಾಥ, ಚೌಹಳ್ಳಿ ಸಿದ್ದರಾಜು, ಸುಜ್ಜಲೂರು ಮಹದೇವ, ವಾಟಾಳು ಸುರೇಶ, ನಾಗೇಶ, ಆಲಗೂಡು ಮಹದೇವಣ್ಣ ಮತ್ತಿತರರಿದ್ದರು.