Advertisement

ರುಚಿಕರ ರೊಟ್ಟಿಗಳು

12:08 PM Oct 11, 2019 | mahesh |

ರೊಟ್ಟಿ ಜನಪ್ರಿಯ ಉಪಹಾರಗಳಲ್ಲಿ ಒಂದು. ಬೆಳಗ್ಗಿನ ಉಪಹಾರಕ್ಕೆ ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಿಕೊಳ್ಳಬಹುದಾದ ರುಚಿಕರ ರೊಟ್ಟಿ ವೈವಿಧ್ಯ ಇಲ್ಲಿದೆ.

Advertisement

ಪಾಲಕ್‌ ರೊಟ್ಟಿ
ಬೇಕಾಗುವ ಸಾಮಗ್ರಿ: 1 ಕಪ್‌ ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು , 1 ಚಮಚ ಕೆಂಪುಮೆಣಸು ಪುಡಿ, 1 ಕಪ್‌ ಅಕ್ಕಿಹಿಟ್ಟು , 1/2 ಕಪ್‌ ಗೋಧಿಹಿಟ್ಟು , ಹುರಿದ ನೆಲಗಡಲೆ ಪುಡಿ- 2 ಚಮಚ, 1 ಚಮಚ ಜೀರಿಗೆ, 1 ಈರುಳ್ಳಿ, ಉಪ್ಪು ರುಚಿಗೆ ತಕ್ಕಷ್ಟು , ತುಪ್ಪ ಯಾ ಎಣ್ಣೆ 3-4 ಚಮಚ.

ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು , ಅಕ್ಕಿಹಿಟ್ಟು, ಗೋಧಿಹಿಟ್ಟು , ಹುರಿದ ನೆಲಗಡಲೆ ಪುಡಿ, ಜೀರಿಗೆ, ಈರುಳ್ಳಿ ಚೂರು, ಸ್ವಲ್ಪ ನೀರು, ಕೆಂಪುಮೆಣಸು ಪುಡಿ ಎಲ್ಲಾ ಸೇರಿಸಿ ಎಣ್ಣೆ ಪಸೆ ಮಾಡಿದ ಬಾಳೆಲೆಯಲ್ಲಿ ರೊಟ್ಟಿ ತಟ್ಟಿ ಕಾದ ತವಾದ ಮೇಲೆ ಹಾಕಿ. ಮೇಲೆ ಎಣ್ಣೆ ಯಾ ತುಪ್ಪ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ರುಚಿಯಾದ ಪಾಲಕ್‌ ಸೊಪ್ಪಿನ ರೊಟ್ಟಿ ಸವಿಯಲು ಸಿದ್ಧ.
ಸಿಹಿಗುಂಬಳಕಾಯಿ ರೊಟ್ಟಿ

ಬೇಕಾಗುವ ಸಾಮಗ್ರಿ: 1 ಕಪ್‌ ಅಕ್ಕಿಹಿಟ್ಟು , 3/4 ಕಪ್‌ ಸಿಹಿಗುಂಬಳಕಾಯಿ ತುರಿ, 2 ಚಮಚ ತೆಂಗಿನತುರಿ, 1 ಚಮಚ ಸಣ್ಣಗೆ ಹೆಚ್ಚಿದ ಕರಿಬೇವು, 1/2 ಕಪ್‌ ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪು , 1/2 ಕಪ್‌ ಸಣ್ಣಗೆ ಹೆಚ್ಚಿದ ಈರುಳ್ಳಿ , 1 ಚಮಚ ಕೆಂಪುಮೆಣಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿಹಿಟ್ಟು , ಸಿಹಿಗುಂಬಳಕಾಯಿ ತುರಿ, ತೆಂಗಿನತುರಿ, ಕರಿಬೇವು ಚೂರು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಈರುಳ್ಳಿ ಚೂರು, ಕೆಂಪುಮೆಣಸಿನ ಪುಡಿ, ಉಪ್ಪು, ಸ್ವಲ್ಪ ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಎಣ್ಣೆ ಪಸೆ ಮಾಡಿದ ಬಾಳೆಲೆ ಯಾ ಪ್ಲಾಸ್ಟಿಕ್‌ ಹಾಳೆಯ ಮೇಲೆ ರೊಟ್ಟಿ ತಟ್ಟಿ ಕಾದ ತವಾದ ಮೇಲೆ ಹಾಕಿ ಮೇಲೆ ಎಣ್ಣೆ ಯಾ ತುಪ್ಪ ಹಾಕಿ 2 ಬದಿ ಬೇಯಿಸಿ ತೆಗೆಯಿರಿ. ಈಗ ರುಚಿಯಾದ ಸಿಹಿಗುಂಬಳಕಾಯಿ ರೊಟ್ಟಿ ಸವಿಯಲು ಸಿದ್ಧ.

Advertisement

ಬಟಾಟೆ ರೊಟ್ಟಿ
ಬೇಕಾಗುವ ಸಾಮಗ್ರಿ: ಸಿಪ್ಪೆ ತೆಗೆದು ತುರಿದ 2 ಆಲೂಗಡ್ಡೆ, 1/2 ಚಮಚ ಜೀರಿಗೆ, 1-2 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು , 1/4 ಕಪ್‌ ಕೊತ್ತಂಬರಿಸೊಪ್ಪು , 1/2 ಕಪ್‌ ಮೊಸರು, 2 ಕಪ್‌ ಜೋಳದ ಹಿಟ್ಟು , ಸಿಪ್ಪೆ ತೆಗೆದು ತರಿ ತರಿಯಾಗಿ ಹುರಿದು ಪುಡಿ ಮಾಡಿದ ನೆಲಗಡಲೆ- 1/4 ಕಪ್‌.

ತಯಾರಿಸುವ ವಿಧಾನ: ತುರಿದ ಆಲೂ, ಜೀರಿಗೆ, ಹಸಿಮೆಣಸು ಚೂರು, ಕೊತ್ತಂಬರಿಸೊಪ್ಪು , ನೆಲಗಡಲೆ ಪುಡಿ, ಜೋಳದ ಹಿಟ್ಟು , ಮೊಸರು, ಉಪ್ಪು ಸೇರಿಸಿ ಬೆರೆಸಿ ಉಂಡೆ ಮಾಡಿ. ನಂತರ ಎಣ್ಣೆ ಪಸೆ ಮಾಡಿದ ಬಾಳೆಲೆಯಲ್ಲಿ ರೊಟ್ಟಿ ತಟ್ಟಿ ಕಾದ ತವಾದ ಮೇಲೆ ಎಣ್ಣೆ ಯಾ ತುಪ್ಪ ಹಾಕಿ 2 ಬದಿ ಬೇಯಿಸಿ ತೆಗೆದರೆ ಪೌಷ್ಟಿಕ ಬಟಾಟೆ ರೊಟ್ಟಿ ಸವಿಯಲು ಸಿದ್ಧ.

ಟೊಮೆಟೊ ರೊಟ್ಟಿ
ಬೇಕಾಗುವ ಸಾಮಗ್ರಿ: ಟೊಮೆಟೊ 2-3, 1 ಕಪ್‌ ಬೆಳ್ತಿಗೆ ಅಕ್ಕಿ, 1-2 ಹಸಿಮೆಣಸು, 1/2 ಕಪ್‌ ತೆಂಗಿನತುರಿ, 1/4 ಕಪ್‌ ಕೊತ್ತಂಬರಿಸೊಪ್ಪು , 1 ಚಮಚ ಜೀರಿಗೆ, 1/4 ಕಪ್‌ ಕೊತ್ತಂಬರಿ ಸೊಪ್ಪು , ಉಪ್ಪು ರುಚಿಗೆ ತಕ್ಕಷ್ಟು , 2 ಈರುಳ್ಳಿ.

ತಯಾರಿಸುವ ವಿಧಾನ: ಹೆಚ್ಚಿದ ಟೊಮೆಟೊ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿ. ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆ ನೆನೆಸಿ. ನಂತರ ಟೊಮೆಟೊ ರಸ, ಅಕ್ಕಿ, ಹಸಿಮೆಣಸು, ಕಾಯಿತುರಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ , ಕೊತ್ತಂಬರಿಸೊಪ್ಪು, ಜೀರಿಗೆ, ಉಪ್ಪು ಹಾಕಿ ಸರಿಯಾಗಿ ಬೆರೆಸಿ. ನಂತರ ಉಂಡೆ ಮಾಡಿ ತವಾದಲ್ಲಿ ತಟ್ಟಿ 2 ಬದಿ ಬೇಯಿಸಿ. ಇದಕ್ಕೆ ರುಬ್ಬುವಾಗ ನೀರು ಹಾಕುವುದು ಬೇಡ.

ಸಾಬಕ್ಕಿ ರೊಟ್ಟಿ
ಬೇಕಾಗುವ ಸಾಮಗ್ರಿ: ತುರಿದ ಆಲೂ- 1/2 ಕಪ್‌, 1 ಕಪ್‌ ಸಾಬಕ್ಕಿ , 2 ಚಮಚ ಕೊತ್ತಂಬರಿಸೊಪ್ಪು , 2 ಚಮಚ ಕರಿಬೇವು, 1 ಚಮಚ ಜೀರಿಗೆ, 1-2 ಹಸಿಮೆಣಸು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಸಾಬಕ್ಕಿಯನ್ನು 10 ನಿಮಿಷ ನೀರಿನಲ್ಲಿ ನೆನೆಸಿ. ನಂತರ 1 ಗಂಟೆ ಕಾಲ ಹಾಗೇ ಇಡಿ. ಕೊತ್ತಂಬರಿಸೊಪ್ಪು , ಕರಿಬೇವು, ಜೀರಿಗೆ, ಹಸಿಮೆಣಸು, ಉಪ್ಪು ಸೇರಿಸಿ ತರಿ ತರಿಯಾಗಿ ರುಬ್ಬಿ. ನಂತರ ತುರಿದ ಆಲೂ, ನೆನೆದ ಸಾಬಕ್ಕಿ, ರುಬ್ಬಿದ ಮಸಾಲೆ ಸೇರಿಸಿ ಸರಿಯಾಗಿ ಬೆರೆಸಿ. ನಂತರ ಉಂಡೆ ಮಾಡಿ ತವಾದಲ್ಲಿ ತಟ್ಟಿ ಎಣ್ಣೆ ಹಾಕಿ 2 ಬದಿ ಬೇಯಿಸಿ. ಅಕ್ಕಿಹಿಟ್ಟು ಬೇಕಾದರೆ 2 ಚಮಚ ಹಾಕಬಹುದು. ಈಗ ರುಚಿಯಾದ ಸಾಬಕ್ಕಿ ರೊಟ್ಟಿಯನ್ನು ಚಟ್ನಿಯೊಂದಿಗೆ ಸವಿಯಿರಿ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next