Advertisement

LG ಕಚೇರಿಯಲ್ಲಿ ಕೇಜ್ರಿವಾಲ್‌ಗೆ

12:37 PM Jun 18, 2018 | udayavani editorial |

ಹೊಸದಿಲ್ಲಿ : ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ ಧರಣಿ ಕೂರುವುದಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಅವರ ಕೆಲವು ಸಂಪುಟ ಸದಸ್ಯರಿಗೆ ಅನುಮತಿ ಕೊಟ್ಟವರು ಯಾರು ಎಂದು ದಿಲ್ಲಿ ಹೈಕೋರ್ಟ್‌ ಇಂದು ದಿಲ್ಲಿ ಸರಕಾರಕ್ಕೆ ಖಡಕ್‌ ಪ್ರಶ್ನೆ ಕೇಳಿದೆ.

Advertisement

“ಸಾಮಾನ್ಯವಾಗಿ ಯಾವುದೇ ರೀತಿಯ ಪ್ರತಿಭಟನೆಗಳನ್ನು ಕಚೇರಿ ಕಟ್ಟಡಗಳ ಹೊರಗೆ ನಡೆಸಲಾಗುತ್ತದೆಯೇ ಹೊರತು ಒಳಗಲ್ಲ” ಎಂದು ದಿಲ್ಲಿ ಹೈಕೋರ್ಟ್‌ ಹೇಳಿತು.

ದಿಲ್ಲಿ ಸರಕಾರದ ಐಎಎಸ್‌ ಅಧಿಕಾರಿಗಳ ಆರೋಪಿತ ಮುಷ್ಕರದ ವಿರುದ್ಧ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಮತ್ತು ಇತರರು ಎಲ್‌ಜಿ ಕಾರ್ಯಾಲಯದಲ್ಲಿ ಧರಣಿ ಕೂರಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎರಡು ಅರ್ಜಿಗಳನ್ನು ಇಂದು ದಿಲ್ಲಿ ಹೈಕೋರ್ಟಿನ ಜಸ್ಟಿಸ್‌ ಎ ಕೆ ಚಾವ್ಲಾ ಮತ್ತು ಜಸ್ಟಿಸ್‌ ನವೀನ್‌ ಚಾವ್ಲಾ ಅವರನ್ನು ಒಳಗೊಂಡ ಪೀಠವು ವಿಚಾರಣೆಗೆ ಎತ್ತಿಕೊಂಡಿತು. 

“ಎಲ್‌ಜಿ ಕಾರ್ಯಾಲಯದ ಒಳಗೆ ಧರಣಿ ಕೂರುವುದಕ್ಕೆ ಅರವಿಂದ ಕೇಜ್ರಿವಾಲ್‌ ಮತ್ತು ಅವರ ಸಂಪುಟದ ಕೆಲವರಿಗೆ ಅವಕಾಶ ಕೊಟ್ಟವರು ಯಾರು ? ಒಂದು ವೇಳೆ ಇದು ಧರಣಿ ಮುಷ್ಕರ ಎಂದಾದರೆ  ಅದನ್ನು ಕಟ್ಟಡದ ಹೊರಗೆ ನಡೆಸಬೇಕೇ ಹೊರತು ಒಳಗಲ್ಲ’ ಎಂದು  ಎರಡು ವಿಷಯಗಳಿಗೆ ಸಂಬಂಧಿಸಿ ಕೋರ್ಟಿನಲ್ಲಿ ದಿಲ್ಲಿ ಸರಕಾರದ ಪರವಾಗಿ ಹಾಜರಿದ್ದ ವಕೀಲರನ್ನು ನ್ಯಾಯಾಧೀಶರು ಕಟುವಾಗಿ ಪ್ರಶ್ನಿಸಿದರು. 

ದಿಲ್ಲಿ ಲೆ| ಗವರ್ನರ್‌ ಅನಿಲ್‌ ಬೈಜಾಲ್‌ ಅವರ ಕಾರ್ಯಾಲಯದಲ್ಲಿ ಕೇಜ್ರಿವಾಲ್‌ ಮತ್ತು ಇತರರು ಧರಣಿ ಕೂರಿರುವುದನ್ನು ಪ್ರಶ್ನಿಸಿ ದಿಲ್ಲಿ ವಿಧಾನ ಸಭೆಯ ವಿಪಕ್ಷ ನಾಯಕ ವಿಜೇಂದ್ರ ಗುಪ್ತಾ ಅವರು ಕೂಡ ಅರ್ಜಿ ಸಲ್ಲಿಸಿದ್ದಾರೆ. 

Advertisement

ಈ ಎಲ್ಲ ಅರ್ಜಿಗಳ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜೂ.22ಕ್ಕೆ ನಿಗದಿಸಿತು. 

ಈ ವಿಷಯಕ್ಕೆ ಸಂಬಂಧಿಸಿ ಐಎಎಸ್‌ ಅಧಿಕಾರಿಗಳನ್ನು ಪ್ರತಿನಿಧಿಸುವ ಸಂಘವನ್ನು ಕೂಡ ಕಕ್ಷಿದಾರನನ್ನಾಗಿ ಮಾಡಬೇಕು ಎಂದು ಕೋರ್ಟ್‌ ಹೇಳಿತು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next