ಹೊಸದಿಲ್ಲಿ: ದಿಲ್ಲಿಯಲ್ಲಿ ಮಾ.15ರಿಂದ 26ರ ವರೆಗೆ ನಡೆಯಲಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಕೂಟಕ್ಕೆ ಬಹಿಷ್ಕಾರ ಹಾಕುತ್ತಿರುವ ದೇಶಗಳ ಸಂಖ್ಯೆ ಏರತೊಡಗಿದೆ. ರಷ್ಯಾದ ಮಹಿಳಾ ಬಾಕ್ಸರ್‌ಗಳು ಇಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ, ಉಕ್ರೇನ್ ತಾನು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ಸತತ ಒಂದು ವರ್ಷದಿಂದ ದಾಳಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ದೇಶಗಳು ರಷ್ಯಾದ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಿವೆ. ಹಾಗಿದ್ದರೂ ರಷ್ಯಾ ಯುದ್ಧ ನಿಲ್ಲಿಸಿಲ್ಲ.
ಈಗಾಗಲೇ ಹೊಸದಿಲ್ಲಿ ಕೂಟದಲ್ಲಿ ಭಾಗವಹಿಸುವುದಿಲ್ಲವೆಂದು ಅಮೆರಿಕ, ಬ್ರಿಟನ್, ಸ್ವಿಟ್ಜರ್ಲೆಂಡ್, ಪೋಲೆಂಡ್, ನೆದರ್ಲೆಂಡ್ಸ್, ಐರ್ಲೆಂಡ್, ಚೆಕ್ ಗಣರಾಜ್ಯ, ಸ್ವೀಡನ್, ಕೆನಡ ಘೋಷಿ ಸಿದೆ. ಅದೇ ಸಾಲಿಗೆ ಈಗ ಉಕ್ರೇನ್ ಸೇರಿಕೊಂಡಿದೆ. ಹಾಗಾಗಿ ಕೂಟ ನಡೆಯುವುದು ಅನಿಶ್ಚಿತವಾಗಿದೆ. ಒಂದು ವೇಳೆ ನಡೆದರೂ ಈ ಕೂಟಕ್ಕೆ ಯಾವುದೇ ಮೌಲ್ಯವೂ ಇರುವುದಿಲ್ಲ. ಪ್ರಬಲ ರಾಷ್ಟ್ರಗಳು ಇಲ್ಲದ, ಕೆಲವೇ ಕೆಲವು ರಾಷ್ಟ್ರಗಳು ಸ್ಪರ್ಧಿಸುವ ಕೂಟದಲ್ಲಿ ಯಾವ ಸ್ಪರ್ಧಿ ಗೆದ್ದರೂ, ಅಲ್ಲಿನ ಫಲಿತಾಂಶವನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
ಹೀಗಾಗಿ ಕೂಟ ನಡೆಯಲಿದೆಯಾ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ. ಹಾಗಂತ ರಷ್ಯಾದ ಬಾಕ್ಸರ್‌ಗಳೇನು ರಷ್ಯಾ ಧ್ವಜದಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಖಾಸಗಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲಿಕ್ಕೆ ಇತರ ರಾಷ್ಟ್ರಗಳು ಸಿದ್ಧವಿಲ್ಲ.