ಹೊಸದಿಲ್ಲಿ : ಇಲ್ಲಿನ ಇಂಡಿಯಾ ಗೇಟ್‌ನಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಮಹಿಳೆಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಾನಸಿಕಳಾಗಿ ಅಸ್ವಸ್ಥಳಿರುವಂತೆ ಕಂಡುಬರುತ್ತಿದ್ದ ಈ ಮಹಿಳೆಯು ಗಣರಾಜ್ಯೋತ್ಸವದ ರಿಹರ್ಸಲ್ ನಡೆಯುತ್ತಿದ್ದ ಅತ್ಯಂತ ಬಿಗಿ ಭದ್ರತೆಯ ಇಂಡಿಯಾ ಗೇಟ್ ಪ್ರದೇಶಕ್ಕೆ ಅದ್ಹೇಗೋ ನುಗ್ಗಿ ಬಂದು ಪಾಕಿಸ್ಥಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ.
ಬಂಧಿತ ಮಹಿಳೆಯನ್ನು ಹೈದರಾಬಾದಿನ ನಿಜಾಮಾಬಾದ್ ನ ಸುಲ್ತಾನಾ ಎಂದು ಗುರುತಿಸಲಾಗಿದೆ. ಮಹಿಳೆಯು ಅಮರ್ ಜವಾನ್ ಜ್ಯೋತಿ ಯನ್ನು ಪ್ರವೇಶಿಸಲು ಯತ್ನಿಸಿದಾಗ ಭದ್ರತಾ ಪಡೆಗಳು ಆಕೆಯನ್ನು ತಡೆದಿದ್ದಾರೆ. ಆಗ ಆಕೆ ಧ್ವನಿ ಏರಿಸಿ ಗದ್ದಲ ಮಾಡಿದ್ದಾಳೆ.
ಆಗ ದಿಲ್ಲಿ ಮಹಿಳಾ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಒಯ್ದಿದ್ದಾರೆ.
ಬಂಧಿತ ಮಹಿಳೆ ಸುಲ್ತಾನಾ ಎರಡು ದಿನಗಳ ಹಿಂದೆ ನಿಜಾಮಾಬಾದ್‌ನಿಂದ ತನ್ನ ಸಂಬಂಧಿಕರ ಜತೆಗೆ ಮುಂಬಯಿಗೆ ಪ್ರಯಾಣಿಸಿದ್ದಳು. ಆದರೆ ಆ ನಡುವೆ ಆಕೆ ದಾರಿ ತಪ್ಪಿ ಹೊಸದಿಲ್ಲಿ ತಲುಪಿದಳು. ಬಂಧಿತಳಾಗಿರುವ ಆಕೆಯನ್ನು ದಿಲ್ಲಿ ಪೊಲೀಸರು ವೈದ್ಯಕೀಯ ಪರೀಕೆಗೆ ಒಳಪಡಿಸಿದ್ದಾರೆ.ಬಳಿಕ ಆಕೆಯನ್ನು ಆಸರೆ ಗೃಹಕ್ಕೆ ಕಳುಹಿಸಿದ್ದಾರೆ. ಇಷ್ಟೆಲ್ಲ ಪ್ರಹಸನ ನಿನ್ನೆ ಭಾನುವಾರ ನಡೆಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಸುಲ್ತಾನಾ ತನ್ನ ಮನೆಯವರಿಗೆ ತಿಳಿಸದೆ ನಿಜಾಮಾಬಾದ್ ನಿಂದ ಹೋಗಿದ್ದಳು. ಆಕೆಯ ಮನೆಯವರು ಪೊಲೀಸರಿಗೆ ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಸುಲ್ತಾನಾಳನ್ನು ಪರೀಕ್ಷಿಸಿರುವ ವೈದ್ಯರು, ಆಕೆ ಮಾನಸಿಕವಾಗಿ ಅಸ್ವಸ್ಥಳಿರುವುದಾಗಿ ದೃಢ ಪಡಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.