ನವದೆಹಲಿ: ತನ್ನನ್ನು ತಾನು ಅನಿವಾಸಿ ಭಾರತೀಯಳೆಂದು ನಂಬಿಸಿ, ಅನೇಕರಿಗೆ ಪಂಗನಾಮ ಹಾಕಿದ್ದ ಅಮರಾ ಗುಜ್ರಾಲ್ ಎಂಬ ಯುವತಿಯೊಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಧರಮ್‌ರಾಜ್ ಎಂಬುವರು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸ್ ಇಲಾಖೆಯ ಸೈಬರ್‌ಕ್ರೈಂ ವಿಭಾಗದ ಅಧಿಕಾರಿಗಳು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಈಕೆ, ಧರಮ್ ರಾಜ್ ಅವರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಳು. ಅದನ್ನು ಸ್ವೀಕರಿಸಿದ್ದ ಧರಮ್ ರಾಜ್, ಇತ್ತೀಚೆಗೆ ಆಕೆಯೊಂದಿಗೆ ಚಾಟ್ ಮಾಡುತ್ತಿದ್ದ. ಆ ವೇಳೆ ತನ್ನನ್ನು ತಾನು ಯುನೈಟೆಡ್ ಕಿಂಗ್‌ಡಂ ನಿವಾಸಿ ಎಂದು ಹೇಳಿಕೊಂಡಿದ್ದ ಆಕೆ, ಒಂದು ದಿನ ಇದ್ದಕ್ಕಿದ್ದಂತೆ ನಾನು ಧರಮ್ ರಾಜ್‌ರನ್ನು ನೋಡಲು ದೆಹಲಿಗೆ ಬರುತ್ತಿರುವುದಾಗಿ ತಿಳಿಸಿದ್ದಳು.
ಅದೊಂದು ದಿನ, ಮಹಿಳೆಯೊಬ್ಬರಿಂದ ಧರಮ್ ಅವರಿಗೆ ಕರೆ ಬಂದಿದ್ದು, ಮುಂಬೈನ ಕಸ್ಟಮ್ ಅಧಿಕಾರಿಗಳು ಯುಕೆಯಿಂದ ಬಂದಿದ್ದ ಅಮರಾ ಎಂಬುವರನ್ನು ಬಂಧಿಸಿದ್ದಾರೆ. ಅವರ ಬ್ಯಾಗ್‌ಗಳಲ್ಲಿ ಬೆಲೆಬಾಳುವ ಉಡುಗೊರೆಗಳಿವೆ. ಅವನ್ನು ನಿಮಗಾಗಿ (ಧರಮ್) ತಂದಿದ್ದಾಗಿ ಅವರು ಹೇಳುತ್ತಿದ್ದು, ಅವನ್ನು ಬಿಡಿಸಿಕೊಳ್ಳಲು ನೀವು (ಧರಮ್) 34,000 ರೂ. ಹಣವನ್ನು ಬ್ಯಾಂಕ್ ಖಾತೆಯೊಂದಕ್ಕೆ ಹಾಕಬೇಕು ಎಂದು, ಬ್ಯಾಂಕ್ ಖಾತೆಯ ಸಂಖ್ಯೆಯೊಂದನ್ನು ನೀಡಿದ್ದಳು. ಅದನ್ನು ನಂಬಿದ್ದ ಧರಮ್, 34,000 ರೂ. ಹಣವನ್ನು ಹಾಕಿದ್ದ.
ಹಣ ಹಾಕಿದ ಕೆಲವೇ ನಿಮಿಷಗಳಲ್ಲಿ ಅಮರಾ, ತನ್ನ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಬ್ಲಾಕ್ ಮಾಡಿದ್ದರು. ಇದರಿಂದ ಅನುಮಾನಗೊಂಡ ಆತ ಪೊಲೀಸರಿಗೆ ದೂರು ನೀಡಿದ್ದ.
ಪೊಲೀಸರು ಹೇಳ್ಳೋದೇನು?
ಅಮರಾ ಗುಜ್ರಾಲ್, ದೆಹಲಿಯ ತಿಲಕ್ ನಗರದಲ್ಲಿ ವಾಸಿಸುತ್ತಿದ್ದಳು. ಈಕೆಗೆ ತಾನಿರುವ ಬಡಾವಣೆಯಲ್ಲೇ ವಾಸವಾಗಿರುವ ಆಫ್ರಿಕಾ ಮೂಲದ ನಿವಾಸಿಗಳು ಪರಿಚಯವಾಗಿದ್ದರು. ಅವರ ಬಳಿ ಸೈಬರ್ ಕ್ರೈಂನ ಕೆಲವು ಪಟ್ಟುಗಳನ್ನು ಕಲಿತ ಆಕೆ, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ವಂಚಿಸಲು ನಿರ್ಧರಿಸಿದ್ದಳು ಎಂದು ಉತ್ತರ ದೆಹಲಿಯ ಡಿಸಿಪಿ ಸಾಗರ್ ಸಿಂಗ್ ಕಾಲ್ಸಿ ತಿಳಿಸಿದ್ದಾರೆ.