Advertisement

ದಿಲ್ಲಿ ಹಿಂಸಾಚಾರದ ಪ್ರತಿಧ್ವನಿ: ಸಂಸತ್‌ ರಣರಂಗ

10:15 AM Mar 04, 2020 | Team Udayavani |

ಹೊಸದಿಲ್ಲಿ: ದೇಶದ ರಾಜಧಾನಿಯಲ್ಲಿ ಈಚೆಗೆ ನಡೆದ ಹಿಂಸಾಚಾರವು ಸೋಮವಾರ ಸಂಸತ್ತಿನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಆಕ್ರೋಶಭರಿತವಾಗಿ ಒತ್ತಾಯಿಸಿದ್ದು, ಒಂದು ಹಂತದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಕೈಕೈ ಮಿಲಾಯಿಸಿದ ಘಟನೆಯೂ ನಡೆಯಿತು.

Advertisement

ಬೆಳಗ್ಗೆ 11 ಗಂಟೆಗೆ ಆರಂಭವಾದ ಗದ್ದಲದ ವಾತಾವರಣ ಮತ್ತೆ ಮತ್ತೆ ಮುಂದುವರಿಯಿತು. ಇದರಿಂದಾಗಿ ಸ್ಪೀಕರ್‌ ಓಂ ಬಿರ್ಲಾ ಕಲಾಪ ಮುಂದೂಡಬೇಕಾಯಿತು. ಸಂಜೆ 4.30ಕ್ಕೆ ಮತ್ತೆ ಸದನ ಸಮಾವೇಶಗೊಂಡಾಗಲೂ ಸ್ಥಿತಿ ಸುಧಾರಿಸದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಬೇಕಾಯಿತು.

ಜೋಷಿ ವಾಗ್ಧಾಳಿ
ವಿಪಕ್ಷಗಳು ಸದನದಲ್ಲಿ ಅನುಚಿತವಾಗಿ ನಡೆದುಕೊಳ್ಳುತ್ತಿವೆ. ಕಲಾಪ ಮುಂದುವರಿಸಿ ಎಂದು ಸಚಿವ ಪ್ರಹ್ಲಾದ್‌ ಜೋಷಿ ಲೋಕಸಭಾ ಅಧ್ಯಕ್ಷರಿಗೆ ಮನವಿ ಮಾಡಿದರು. 1984ರಲ್ಲಿ ಕಾಂಗ್ರೆಸಿಗರು 3 ಸಾವಿರ ಮಂದಿಯ ಕೊಲೆ ಮಾಡಿಸಿ, ತನಿಖೆಯನ್ನೇ ನಡೆಸಿರಲಿಲ್ಲ. ಆದರೆ ನಾವು ದಿಲ್ಲಿ ಘಟನೆಗಳ ಕುರಿತು ತನಿಖೆ ನಡೆಸಿ, ಶಾಂತಿ ಸ್ಥಾಪನೆಗೆ ಆದ್ಯತೆ ನೀಡಿದ್ದೇವೆ. ವಿಪಕ್ಷಗಳು ತೆÌàಷಮಯ ವಾತಾವರಣಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂದು ದೂರಿದರು.

ರಾಜ್ಯಸಭೆಯಲ್ಲೂ ಗದ್ದಲ
ಮೇಲ್ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ದಿಲ್ಲಿ ಗಲಭೆ ಮುಂದಿಟ್ಟು  ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಗದ್ದಲವೆಬ್ಬಿಸಿದವು. ಗದ್ದಲದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪಗಳನ್ನು ಸಭಾಪತಿ ವೆಂಕಯ್ಯ ನಾಯ್ಡು ಮುಂದೂಡಿದ್ದರು. ಮರಳಿ ಸದನ ಸಮಾವೇಶಗೊಂಡಾಗಲೂ ಪರಿಸ್ಥಿತಿ ಸುಧಾರಣೆ ಕಾಣದೆ ಇದ್ದಾಗ ಕಲಾಪ ಮುಂದೂಡಲಾಯಿತು.

ಎಳೆದಾಟ, ತಳ್ಳಾಟ
ಗದ್ದಲದ ಸಂದರ್ಭದಲ್ಲಿ ಬಿಜೆಪಿಯ ಕೆಲವು ಸಂಸದರು ತಮ್ಮನ್ನು ಹಿಡಿದು ಎಳೆದಾಡಿದರು ಎಂದು ಕೇರಳದ ಕಾಂಗ್ರೆಸ್‌ ಸಂಸದೆ ರಮ್ಯಾ ಹರಿದಾಸ್‌ ಸ್ಪೀಕರ್‌ಗೆ ಲಿಖೀತ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಕಲಾಪ ನಿರ್ವಹಿಸುತ್ತಿದ್ದ ಬಿಜೆಪಿ ಸಂಸದೆ ರಮಾದೇವಿ ಇಂಥ ಘಟನೆ ತಪ್ಪೆಂದರು. ಅವರು ಕಲಾಪ ಮುಂದೂಡಿದರೂ ಬಿಜೆಪಿ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next