ಪಣಜಿ : ಪ್ರವಾಸಿ ತಾಣ ಗೋವಾಕ್ಕೆ ಭೇಟಿ ನೀಡಿದ್ದ ದೆಹಲಿಯ ಕುಟುಂಬದ ಮೇಲೆ ಅಂಜುನಾ ಪ್ರದೇಶದಲ್ಲಿ ಸ್ಥಳೀಯರು ಕತ್ತಿಗಳು ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿ ಗೋವಾ ಪೊಲೀಸರು ಮೂವರನ್ನು ಬಂಧಿಸಿದ್ದು, ಕೊಲೆ ಯತ್ನ ಆರೋಪ ಹೊರಿಸಿದ್ದಾರೆ. ದಾಳಿಕೋರರ ಬಗ್ಗೆ ಪೊಲೀಸರು ಮೃದು ಧೋರಣೆ ತೋರಿದ್ದಾರೆ ಎಂದು ಸಂತ್ರಸ್ತರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ವಿರುದ್ಧ ಪ್ರಾಥಮಿಕ ತನಿಖೆಯನ್ನೂ ಆರಂಭಿಸಲಾಗಿದೆ.
ದೆಹಲಿ ನಿವಾಸಿ 47 ವರ್ಷದ ಅಶ್ವಿನಿ ಕುಮಾರ್ ಚಂದ್ರಾನಿ ಎಂಬುವವರ ಮೇಲೆ ಮಾರ್ಚ್ 5 ರಂದು ಸಂಜೆ 5 ಗಂಟೆ ಸುಮಾರಿಗೆ ಅಂಜುನ ನಿವಾಸಿಗಳು ಹಲ್ಲೆ ನಡೆಸಿದ್ದರು. ರೋಷನ್ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ, ದೇಹದ ಪ್ರಮುಖ ಭಾಗಗಳ ಮೇಲೆ ಚಾಕು ಮತ್ತು ಇತರ ಆಯುಧಗಳಿಂದ ಹಲ್ಲೆ ನಡೆಸಿರುವುದನ್ನು ಅವರು ಕಂಡುಕೊಂಡರು, ಆದ್ದರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಯ ಯತ್ನ) ಅನ್ನು ಅನ್ವಯಿಸಲಾಗಿದೆ ಎಂದು ಅಂಜುನಾ ಪೊಲೀಸರು ತಿಳಿಸಿದ್ದಾರೆ.